ಗದಗ: ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಜರುಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಇಂದು ನಡೆದ ವೀರಭದ್ರೇಶ್ವರ ಜಾತ್ರೆಯ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.
ಮೃತರನ್ನು ರೋಣದ ಕೆವಿಜಿ ಬ್ಯಾಂಕ್‌ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಹಾಗೂ ಕೈ ಮೇಲೆ ಹಚ್ಚಿ ಹಾಕಿಸಿಕೊಂಡಿರುವ ಮತ್ತೋರ್ವ ಮೃತನ ಹೆಸರು ಹಾಗೂ ವಿಳಾಸವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಪ್ರತಿವರ್ಷದಂತೆ ಜರುಗುವ ಅದ್ಧೂರಿ ವೀರಭದ್ರೇಶ್ವರ ಜಾತ್ರೆ ಇಂದು ಕೂಡ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ರಥ ಎಳೆಯುವ ವೇಳೆ ಭಕ್ತರು ಎಸೆದ ಉತ್ತತ್ತಿ ಆರಿಸುವಾಗ ರಥದ ಚಕ್ರದಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಭಕ್ತನ ತಲೆ ಮೇಲೆ ರಥದ ಚಕ್ರ ಹರಿದಿದೆ.
ಘಟನೆಯಿಂದಾಗಿ ಸಂಭ್ರಮದ ಜಾತ್ರೆಯಲ್ಲಿ ಮೌನ ಆವರಿಸಿದೆ. ರಥೋತ್ಸವದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಧಾರವಾಡ ಮತ್ತು ವಿಜಯಪುರ ಜಿಲ್ಲೆಯಲ್ಲೂ ಇತ್ತೀಚೆಗೆ ಇದೇ ರೀತಿಯ ಘಟನೆಗಳು ನಡೆದಿದ್ದವು. ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ವೇಳೆ ತೇರಿನ ಚಕ್ರಕ್ಕೆ ಸಿಲುಕಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
ಹಾಗೆಯೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವದ ವೇಳೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.