ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಪಹರಣ ಹಾಗೂ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳು ಬಳಸಿದ್ದ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿ ವಿನಯ್ ಹೆಸರಿನಲ್ಲಿ ನೋಂದಣಿಯಾಗಿರುವ ಕೆಂಪು ಬಣ್ಣದ ಒಂದು ಜೀಪ್ ಹಾಗೂ ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿರುವ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಜಪ್ತಿ ಮಾಡಲಾಗಿದೆ. ರೇಣುಕಾಸ್ವಾಮಿ ಹತ್ಯೆಯಾದ ಜೂನ್ 8ರ ರಾತ್ರಿ ಘಟನಾ ಸ್ಥಳಕ್ಕೆ ಬರಲು ನಟ ದರ್ಶನ್ ಬಳಸಿದ್ದ ಜೀಪ್ ಹಾಗೂ ಸ್ಕಾರ್ಪಿಯೋ ಕಾರನ್ನು ಜಪ್ತಿ ಮಾಡಲಾಗಿದ್ದು, ಕಾರಿನಲ್ಲಿ ಮದ್ಯದ ಬಾಟಲಿ ಸಹ ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ.
ಇದನ್ನೂ ಓದಿ: 'ಕಾನೂನು ಪರಮೇಶ್ವರ್ಗೂ, ದರ್ಶನ್ಗೂ ಒಂದೇ': ಗೃಹ ಸಚಿವ - Parameshwar on Darshan case
ಕೃತ್ಯ ನಡೆದಿದ್ದ ಪಟ್ಟಣಗೆರೆಯ ಶೆಡ್ ಬಳಿ ಜೂನ್ 9ರ ಮುಂಜಾನೆ ನಟ ದರ್ಶನ್ ಸಹವರ್ತಿಗಳು ಕಾರಿನಲ್ಲಿ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾಗೌಡ, ದರ್ಶನ್, ಪವನ್, ವಿನಯ್, ಪ್ರದೋಶ್, ನಂದೀಶ್, ದೀಪಕ್, ಲಕ್ಷ್ಮಣ್, ನಾಗರಾಜು, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ಹಾಗೂ ರಾಘವೇಂದ್ರ ಎಂಬ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.