ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪ್‌ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ನಡೆದಿದ್ದ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಇಬ್ಬರು ಆರೋಪಿಗಳನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅತೀಶ್ ಹಾಗೂ ಅಜಯ್ ಕುಮಾರ್ ಬಂಧಿತ ಆರೋಪಿಗಳು. ಮಾರ್ಚ್ 24ರಂದು ನಡೆದಿದ್ದ ಲಿಖಿತ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಆರೋಪಿಗಳು, ಮಾರ್ಚ್ 30ರಂದು ಕೌಶಲ್ಯ ಪರೀಕ್ಷೆಗೆ ಹಾಜರಾದಾಗ ಕಳ್ಳಾಟ ಬಯಲಾಗಿತ್ತು.
ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪ್‌ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಮಾರ್ಚ್ 9ರಂದು ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಆರೋಪಿಗಳಾದ ಅಕ್ಷಿತ್ ಮತ್ತು ಅಜಯ್ ಕುಮಾರ್, ಡಿಡಿ ಮುಖಾಂತರ ಹಣ ಪಾವತಿಸಿದ್ದರು. ಆದರೆ ಮಾರ್ಚ್ 24ರಂದು ನಡೆದಿದ್ದ ಲಿಖಿತ ಪರೀಕ್ಷೆಗೆ ಆರೋಪಿಗಳ ಪರವಾಗಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ವೇಳೆ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಬೆರಳಚ್ಚು ಮಾದರಿ ಸಂಗ್ರಹಿಸಲಾಗಿತ್ತು. ಬಳಿಕ ಮಾರ್ಚ್ 30ರಂದು ಕರೆಯಲಾಗಿದ್ದ ಕೌಶಲ್ಯ ಪರೀಕ್ಷೆಗೆ ಆರೋಪಿಗಳು ಹಾಜರಾದಾಗ ಬೆರಳಚ್ಚು ಹೊಂದಾಣಿಕೆಯಾಗದ ಕಾರಣ, ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿಗಳ ವಂಚನೆ ಯತ್ನ ಬಯಲಾಗಿತ್ತು.
ಆರೋಪಿಗಳ ವಿರುದ್ಧ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಪ್ರತಿನಿಧಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಠಾಣಾ ಪೊಲೀಸರು ಆರೋಪಿಗಳಾದ ಅಕ್ಷಿತ್ ಮತ್ತು ಅಜಯ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ನಕಲಿ ಅಭ್ಯರ್ಥಿಗಳಿಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಲಾಭಾಂಶ ಕೊಡುವ ನೆಪದಲ್ಲಿ 84 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ - Money fraud