ದಾವಣಗೆರೆ: ಜಿಲ್ಲೆಯ ಜೀವನಾಡಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅವಾಂತರ ಕೂಡ ಮಾಡಿದೆ. ಹರಿಹರ ಹಾಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಕೆಲ ಗ್ರಾಮಗಳ ಸಂಪರ್ಕದ ಕೊಂಡಿ ಪತ್ತೆಪುರ - ನಂದಿಗುಡಿ ಸೇತುವೆ, ರಸ್ತೆ ಜಲಾವೃತಗೊಂಡಿದೆ. ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಈ ಭಾಗದ ಜನರು ಜನಪ್ರತಿನಿಧಿಗಳಿಗೆ ಹೇಳಿದ್ದರೂ ಕೂಡ ಸಮಸ್ಯೆ ಮಾತ್ರ ಬಗೆಹರೆದಿಲ್ಲ.
ಶ್ರೀ ಉಕ್ಕಡಗಾತ್ರಿ ಕ್ಷೇತ್ರಕ್ಕೆ ಈ ಸೇತುವೆ ಹಾಗು ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮಾಕನೂರು, ಮುದ್ದೇನೂರು, ನಾಗೇನಹಳ್ಳಿ, ಹನುಮಹಳ್ಳಿ ಹೀಗೆ ಸಾಕಷ್ಟು ಹಳ್ಳಿಗಳು ದಾವಣಗೆರೆ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಾಗಿವೆ. ಈ ಹಳ್ಳಿಯ ಜನ ದಾವಣಗೆರೆಯ ಹರಿಹರ ತಾಲೂಕಿನ ಪತ್ತೆಪುರ, ನಂದಿಗುಡಿ, ಮಲೇಬೆನ್ನೂರು, ಬಾನುಹಳ್ಳಿಗೆ ಈ ಸೇತುವೆ ಮೂಲಕ ತೆರಳುತ್ತಿದ್ದರು. ಈಗ ಸೇತುವೆ ಮುಳುಗಡೆಯಾಗಿರುವುದರಿಂದ ತುಮ್ಮಿನಕಟ್ಟೆ ರಸ್ತೆ ಮೂಲಕ 15 ಕಿ.ಮೀ. ಕ್ರಮಿಸಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಸಿದ ಪರಿಣಾಮ ಜಲಾವೃತಗಳು ಉಂಟಾಗುತ್ತಿದೆ. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಖುಷಿ ಒಂದೆಡೆಯಾದರೆ ಅದೇ ನೀರಿನಿಂದ ರೈತರ ಜಮೀನುಗಳು ನಾಶವಾಗಿದೆ. ತೆಂಗು, ಅಡಿಕೆ, ಭತ್ತದ ಗದ್ದೆಗಳು ನದಿ ನೀರಿನಿಂದ ಜಲಾವೃತವಾಗಿದೆ.
ಮೆಕ್ಕೆಜೋಳದ ತೆನೆ ಮೊಳಕೆ ಒಡೆಯುವ ಮುನ್ನ ಸಸಿಗಳು ನೆಲಕಚ್ಚಿವೆ. ನದಿ ನೀರು ವಾರಗಟ್ಟಲೆ ಅಡಿಕೆ ತೋಟದಲ್ಲಿ ನಿಂತರೆ ಅಡಿಕೆ ಗಿಡದ ಕಾಂಡಗಳು ಕೊಳೆಯುವ ಆತಂಕ ರೈತರಿಗೆ. ಪ್ರತಿವರ್ಷವೂ ಇದೇ ಸಮಸ್ಯೆ ತಲೆದೋರಿದ್ದು ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಸ್ವಾಮಿ ಎಂದು ರೈತರು ಜಿಲ್ಲಾಡಳಿತಕ್ಕೆ ಒಕ್ಕೊರಲ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಭಾರಿ ಮಳೆ ಎಚ್ಚರಿಕೆ: ನಾಳೆಯೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಲೆಗಳಿಗೆ ರಜೆ - Holidays For Schools