ಕೊಪ್ಪಳ: "ತುಂಗಭದ್ರಾ ಜಲಾಶಯದಲ್ಲಿನ 65 ಟಿಎಂಸಿ ನೀರು ಖಾಲಿ ಮಾಡದೇ 19ನೇ ಗೇಟಿನ ವಾಸ್ತವ ಪತ್ತೆ ಹಚ್ಚಲು ಮತ್ತು ದುರಸ್ತಿ ಸಾಧ್ಯವಿಲ್ಲ" ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಗೇಟಿನ ಚೈನ್ಲಿಂಕ್ ಕಟ್ ಆಗಿದೆ. ಒಂದೇ ಗೇಟ್ನಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಪರಿಣಾಮ ಗೇಟ್ ಮೇಲಿನ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಉಳಿದ ಗೇಟ್ಗಳಿಂದಲೂ ನೀರು ಹರಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಚಿವ ತಂಗಡಗಿ ಅಣೆಕಟ್ಟನ್ನು ಪರಿಶೀಲಿಸಿದ್ದಾರೆ. ಬಳಿಕ ಅಧಿಕಾರಿಗಳೊಂದಿಗೆ ಇದಕ್ಕೆ ಏನು ಪರಿಹಾರ, ಎಷ್ಟು ದಿನದಲ್ಲಿ ಕೈಗೊಳ್ಳಬಹುದು, ತಜ್ಞರನ್ನು ಎಲ್ಲಿಂದ ಕರೆಯಿಸಿಕೊಳ್ಳಬೇಕು ಎಂಬ ಇತ್ಯಾದಿ ಮಾಹಿತಿ ಪಡೆದುಕೊಂಡರು.
ನಂತರ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಜಲಾಶಯದ 19ನೇ ಗೇಟಿನ ಚೈನ್ಲಿಂಕ್ ಕಟ್ ಆಗಿದ್ದು ಇದರಿಂದ ಒಂದೇ ಗೇಟಿನಲ್ಲಿ 35 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಹೋಗುತ್ತಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ದುರಸ್ತಿ ಕೈಗೊಳ್ಳಬೇಕಾದರೆ ಜಲಾಶಯದಲ್ಲಿನ ಸುಮಾರು 65 ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ತಿಳಿಸಿದ್ದಾರೆ. ಜಲಾಶಯದ ಸುರಕ್ಷತೆಗೆ ಪರ್ಯಾಯ ಮಾರ್ಗವಿಲ್ಲದಂತಾಗಿದೆ. ಇದೀಗ ನೀರು ಖಾಲಿ ಮಾಡಿಸುವ ಕೆಲಸ ಹಂತ ಹಂತವಾಗಿ ಆರಂಭಿಸಲಾಗುವುದು" ಎಂದಿದ್ದಾರೆ.
"ಘಟನೆಯ ಕುರಿತು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅವರು ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ತಕ್ಷಣದಿಂದ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯದ ಅಪಾರ ನೀರು ಖಾಲಿ ಮಾಡುವುದರಿಂದ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು" ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
"ದೊಡ್ಡ ಫೋರ್ಸ್ನಲ್ಲಿ ನೀರು ಹೋಗುತ್ತಿರುವುದರಿಂದ 20 ಅಡಿ ನೀರು ಖಾಲಿಯಾದಾಗ ಮಾತ್ರ ಆ ಗೇಟ್ ಏನಾಗಿದೆ ಎಂದು ನೋಡಲು ಸಾಧ್ಯ. ಗೇಟ್ನ ಚೈನ್ ಲಿಂಕ್ ಪುರ್ಣವಾಗಿ ಕಟ್ ಆಗಿರುವುದರಿಂದ ಗೇಟ್ ಎಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ಗಳು, ಡ್ಯಾಂ ಕಟ್ಟುವಾಗ ಇದ್ದಂತಹ ವಿನ್ಯಾಸಕಾರರ ಹತ್ತಿರವೂ ಡ್ಯಾಂನ ಮಾದರಿ ವಿನ್ಯಾಸವನ್ನು ತರಿಸುತ್ತಿದ್ದೇವೆ. ಇಂದು ಬೆಳಗ್ಗೆ ಇದಕ್ಕೆ ಸಂಬಂಧಿಸಿ ಕೆಲಸ ಮಾಡುವವರು ಬರಲಿದ್ದಾರೆ. ಸದ್ಯ ಅಣೆಕಟ್ಟಿನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ದುರಸ್ತಿಗೊಂಡಿರುವ ಒಂದೇ ಗೇಟ್ನಿಂದ ಕನಿಷ್ಠ 35 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಹೀಗಾಗಿ, ಉಳಿದ ಎಲ್ಲಾ ಗೇಟ್ಗಳನ್ನು ತೆರೆದಿದ್ದೇವೆ" ಎಂದರು.
"ಒಂದೇ ಬಾರಿಗೆ ನೀರನ್ನು ಅಣೆಕಟ್ಟಿನಿಂದ ಹೊರ ಬಿಟ್ಟರೆ ಹಳ್ಳಿಗಳಿಗೆ ಏನು ಸಮಸ್ಯೆಯಾಗುತ್ತದೆ ಎಂಬುದನ್ನು ನೋಡಬೇಕು. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ವರಿಷ್ಠಾಧಿಕಾರಿಗಳಿಗೆ ಅಲರ್ಟ್ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ನಾನು ನಿರಂತರವಾಗಿ ಮಾತನಾಡಿಕೊಂಡು ಬಂದಿದ್ದೇನೆ. ಸದ್ಯ ನನಗೆ ಇರುವ ಮಾಹಿತಿ ಪ್ರಕಾರ, 2 ಲಕ್ಷ 35 ಸಾವಿರ ಕ್ಯೂಸೆಕ್ವರೆಗೆ ನೀರು ಬಿಡಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ, ಯಾವುದೇ ಹಳ್ಳಿ ಮುಳುಗಲ್ಲ. ಸ್ವಲ್ಪಮಟ್ಟಿಗೆ ಬೆಳೆಗೆ ಹಾನಿ, ಜಮೀನಿಗೆ ನೀರು ಹೋಗಬಹುದು. ಆದರೆ ಎರಡೂವರೆ ಲಕ್ಷ ಕ್ಯೂಸೆಕ್ಗಿಂತ ಅಧಿಕ ನೀರು ಬಿಡುಗಡೆಯಾದರೆ ಪರಿಣಾಮ ಬೀರುವ ಲಕ್ಷಣಗಳಿವೆ" ಎಂದು ಸಚಿವರು ತಿಳಿಸಿದರು.