ತುಮಕೂರು: ಮದುವೆ ಹೆಸರಲ್ಲಿ ಅವಿವಾಹಿತರನ್ನೇ ಟಾರ್ಗೆಟ್ ಮಾಡ್ತಿದ್ದ ತಂಡವನ್ನು ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಆರೋಪಿಗಳು ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ-ಚಿನ್ನದೊಂದಿಗೆ ಪರಾರಿಯಾಗುತ್ತಿದ್ದರು. ತುಮಕೂರು ಸೇರಿದ್ದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ: ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆದ ಮದುವೆ ಈಗ ಚರ್ಚಾಸ್ಪದವಾಗಿದೆ. ಪಾಲಾಕ್ಷ್ಯ ಎಂಬವರು ಮಗನಿಗೆ ಮದುವೆ ಮಾಡಲು ಹರಸಾಹಸಪಟ್ಟಿದ್ದರು. ಅನೇಕ ಕಡೆ ಹೆಣ್ಣು ಹುಡುಕಿದ್ರೂ ಮಗನಿಗೆ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಈ ಸಂದರ್ಭದಲ್ಲಿ ಕುಷ್ಟಗಿ ಮೂಲದ ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಪರಿಚಯವಾಗಿದೆ.
ಬ್ರೋಕರ್ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿ ಹುಡುಗಿ ಮತ್ತು ಆಕೆಯ ಚಿಕ್ಕಪ್ಪ-ಚಿಕ್ಕಮ್ಮಳನ್ನು ತೋರಿಸಿದ್ದಳು. ಕಳೆದ ವರ್ಷ ನವೆಂಬರ್ 11ನೇ ತಾರೀಕು ಅತ್ತಿಗಟ್ಟೆಗೆ ಬಂದಿದ್ದ ಯುವತಿ ಕುಟುಂಬ ಪಾಲಾಕ್ಷ್ಯ ಬಳಿ ಮದುವೆ ಮಾತುಕತೆ ನಡೆಸಿತ್ತು. ಮಾತುಕತೆ ನಡೆಸಿದ ಮರುದಿನವೇ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿ ಮುಗಿಸಿದ್ದರು.
ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸೇರಿದ್ದರು. ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಸೇರಿದಂತೆ 25 ಗ್ರಾಂ ಚಿನ್ನಾಭರಣ ಹಾಕಿದ್ದರು. ಹೆಣ್ಣು ತೋರಿಸಿದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ಕಾರಣ ನೀಡಿ ಯುವತಿಯನ್ನು ಹಣ-ಚಿನ್ನದ ಒಡವೆ ಸಹಿತ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಮಧುಮಗಳು ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಪಾಲಾಕ್ಷ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್ ಗುಬ್ಬಿಗೆ ಬಂದ ಪಾಲಕ್ಷ್ಯ ಎಲ್ಲರ ವಿರುದ್ಧ ಪೊಲೀಸ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸುತ್ತಿದ್ದರು.
ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕುಟುಂಬವನ್ನು ಪೊಲೀಸರು ಇದೀಗ ಪತ್ತೆ ಹಚ್ಚಿದ್ದಾರೆ. ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ನಾಲ್ವರನ್ನು ಬಂಧಿಸಿದ್ದಾರೆ. ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಈ ತಂಡ ನಕಲಿ ವಿಳಾಸದಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ ಮನೆಯವರನ್ನು ನಂಬಿಸುತ್ತಿದ್ದರು. ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಪ್ರಕರಣದಲ್ಲಿ ನಾಲ್ವರನ್ನು ಬಂದಿಸಲಾಗಿದೆ. ವಧುವಾಗಿದ್ದ ಕೋಮಲ ಅಲಿಯಾಸ್ ಲಕ್ಷ್ಮಿ ಮತ್ತು ಬ್ರೋಕರ್ ಲಕ್ಷ್ಮಿ ಇಬ್ಬರನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ವಧುವಿನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಪಾತ್ರ ಮಾಡಿದ್ದ ಸಿದ್ದಪ್ಪ ಮತ್ತು ಲಕ್ಷ್ಮಿಬಾಯಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಇವರ ಮೇಲೆ ಎಂಟು ತಿಂಗಳ ಹಿಂದೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲರೂ ತಮ್ಮ ಮೊಬೈಲ್ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ನಂತರ ತಾಂತ್ರಿಕ ಪರಿಣಿತರ ಸಹಾಯದಿಂದ ಪತ್ತೆ ಹಚ್ಚಲಾಯಿತು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.