ಬೆಂಗಳೂರು: ನಗರದಲ್ಲಿ ಅನಗತ್ಯವಾಗಿ ಹೈ - ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಚಾಲಕರ ವಿರುದ್ಧ ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಸಂಚಾರಿ ಪೊಲೀಸರು ಒಟ್ಟು 234 ಪ್ರಕರಣಗಳನ್ನ ದಾಖಲಿಸಿಕೊಂಡು 1.08 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಹೈ - ಬೀಮ್ ಲೈಟ್ ಬಳಕೆ ಸಹ ಕಾರಣವಾಗುತ್ತಿರುವುದರಿಂದ ತಡರಾತ್ರಿ ಅಶೋಕನಗರ, ಸದಾ ಶಿವನಗರ, ಶೇಷಾದ್ರಿಪುರಂ, ಹಲಸೂರು ಗೇಟ್, ವಿಲ್ಸನ್ ಗಾರ್ಡನ್, ಉಪ್ಪಾರಪೇಟೆ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ ಸೇರಿದಂತೆ 13 ಸಂಚಾರಿ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ, ನಿಯಮ ಉಲ್ಲಂಘಿಸಿ ಹೈ - ಬೀಮ್ ಲೈಟ್ ಬಳಸುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.
ಹೈ - ಬೀಮ್ ಲೈಟ್ ಯಾವಾಗ ಬಳಸಬಹುದು?: ಹೈ-ಬೀಮ್ ಹೆಡ್‌ಲೈಟ್‌ಗಳು ಸಾಮಾನ್ಯ ಹೆಡ್‌ಲೈಟ್‌ಗಳಿಗಿಂತಲೂ ಹೆಚ್ಚು ಪ್ರಕಾಶವಾದ ಬೆಳಕನ್ನ ಹೊರ ಸೂಸುತ್ತವೆ. ಅವುಗಳನ್ನ ಸೂಕ್ತವಾಗಿ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಅಡ್ಡಿಪಡಿಸಬಹುದು ಅಥವಾ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ.
1989ರ ಕೇಂದ್ರ ಮೋಟಾರು ವಾಹನ ಕಾಯ್ದೆ ಅನುಸಾರ ''ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ (ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಮತ್ತಿತರ ಸಂದರ್ಭಗಳಲ್ಲಿ) ಹೈ - ಬೀಮ್ ಹೆಡ್ಲೈಟ್ಸ್ ಬಳಸಬಹುದು. ಆದರೆ, ನಿಮ್ಮ ವಾಹನದ ಮುಂದಿರುವ ವಾಹನದ ಹಿಂದಿನ ದೀಪಗಳ ಬೆಳಕು ನಿಮಗೆ ರಸ್ತೆ ಗೋಚರಿಸಲು ಸಹಾಯವಾಗುತ್ತಿಲ್ಲ ಅಥವಾ ಮುಂದೆ ಯಾರೂ ಇಲ್ಲ ಎಂದರಷ್ಟೇ ಹೈ - ಬೀಮ್ ಬಳಸಬಹುದಾಗಿದೆ. ಮತ್ತು ಎದುರು ದಿಕ್ಕಿನಿಂದ ಮತ್ತೊಂದು ವಾಹನ ಬಂದಾಗ/ಜನವಸತಿ ಪ್ರದೇಶಗಳಲ್ಲಿ/ನಗರ ಪ್ರದೇಶಗಳಲ್ಲಿ/ಸಂಚಾರ ದಟ್ಟಣೆಯಿರುವ ಕಡೆಗಳಲ್ಲಿ ಹೈ-ಬೀಮ್ ಬಳಸುವಂತಿಲ್ಲ.