ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ದಿನ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಹಾರಿಸುವ 21 ಕುಶಾಲತೋಪು ಸಿಡಿಸುವ ಫಿರಂಗಿಗಳ ತಾಲೀಮಿಗೂ ಮುನ್ನ ಇಂದು ಅರಮನೆಯ ಆನೆ ಬಾಗಿಲಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಾಡ ಹಬ್ಬದ ಸಿದ್ಧತೆಗಳು ಅರಮನೆಯ ನಗರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. ಇದರ ಜತೆ ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 14 ಗಜಪಡೆಗಳು ವಿವಿಧ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಜೊತೆಗೆ ದಸರಾದ ಕಾಮಗಾರಿಗಳು ಸಹ ಆರಂಭಗೊಂಡಿವೆ. ಇಂದು ಅಂಬಾವಿಲಾಸ ಅರಮನೆಯ ಆನೆ ಬಾಗಿಲಿನಲ್ಲಿ ಇರುವ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.
ಜಂಬೂ ಸವಾರಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ಇರುವ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಫಿರಂಗಿಗಳ ಮೂಲಕ 21 ಕುಶಾಲತೋಪು ಸಿಡಿಸಲಾಗುತ್ತದೆ. ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಈ ಆಚರಣೆ ನಡೆಯುತ್ತದೆ. ಜೊತೆಗೆ ಗಜಪಡೆಯು ಜನರ ಶಬ್ಧಕ್ಕೆ ಹೆದರದಂತೆ ದಸರಾ ಸಮಯದಲ್ಲಿ ಮೂರು ಬಾರಿ ವಸ್ತು ಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು ಕೈಗೊಳ್ಳಲು ಈ ಫಿರಂಗಿಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಅರಮನೆಯ ಒಳಗೆ ಸಿಬ್ಬಂದಿ ತಾಲೀಮು ನಡೆಸುತ್ತಾರೆ.
ಫಿರಂಗಿಗೆ ಪೂಜೆ: ಅರಮನೆಯ ಒಳಗೆ ಇರುವ ಸ್ಥಳದಲ್ಲಿ ನಿಲ್ಲಿಸಲಾಗಿರುವ 11 ಫಿರಂಗಿಗಳನ್ನು ಸ್ವಚ್ಛ ಮಾಡಿ, ಬಳಿಕ ಸಾಲಾಗಿ ನಿಲ್ಲಿಸಿ, ವಿಭೂತಿ, ಕುಂಕುಮ, ಅರಿಶಿಣ ಹಚ್ಚಿ, ಮಾವಿನ ತೋರಣ, ಬಾಳೆ ಕಂದುಗಳನ್ನು ಕಟ್ಟಿ, ಚಾಮುಂಡೇಶ್ವರಿಯ ಫೋಟೋ ಇಟ್ಟು ಪೂಜೆ ಮಾಡಲಾಯಿತು. ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಸೇರಿದಂತೆ ಅರಮನೆಯ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು. ಅರ್ಚಕ ಪ್ರಹ್ಲಾದ್ ರಾವ್ ಫಿರಂಗಿ ಪೂಜೆ ನೆರವೇರಿಸಿದರು.
ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದೆ ಎಂದ ಆಯುಕ್ತರು: ಫಿರಂಗಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ''ದಸರಾ ಸಂದರ್ಭದಲ್ಲಿ 21 ಕುಶಲತೋಪುಗಳನ್ನ ಸಿಡಿಸಲು ಹಾಗೂ ಬನ್ನಿಮಂಟಪದ ಬಳಿ ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಬಳಸುತ್ತೇವೆ. ಆದ್ದರಿಂದ ಸಿಬ್ಬಂದಿ ತರಬೇತಿ ನಡೆಸಲು ಇಂದು ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು'' ಎಂದು ತಿಳಿಸಿದರು.
''ಚಾಮುಂಡೇಶ್ವರಿ ಗೌರವ ಸಲ್ಲಿಸಲು ಜಂಬೂ ಸವಾರಿಯ ದಿನ 21 ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಅದರ ಅಂಗವಾಗಿ ಇಂದು ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಮೊದಲು ಗಣಪತಿ ಹಾಗೂ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ಫಿರಂಗಿಗಳ ಪೂಜೆ ನಡೆಯಿತು'' ಎಂದು ಮುಖ್ಯ ಅರ್ಚಕ ಪ್ರಹ್ಲಾದ್ ರಾವ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಡಾನೆ ಸೆರೆಗೆ ಬಳಸುವ ವಿಶೇಷ ಹಗ್ಗ ತಯಾರಿಸುವುದು ಹೇಗೆ? - special jute rope