ದಾವಣಗೆರೆ : ಸುತ್ತಲೂ ಹಸಿರು ಹೊದಿಕೆ, ಮಧ್ಯೆ ಪುಟ್ಟ ಹಳ್ಳಿ, ಗುಡ್ಡಗಾಡು ಕಾನನದ ನಡುವೆ ಜುಳು ಜುಳು ಜಲಪಾತಗಳು ಸೃಷ್ಟಿ ಆಗಿವೆ. ಅದು ದಾವಣಗೆರೆ ಜಿಲ್ಲೆಯ ಏಕೈಕ ಜಲಧಾರೆ. ಇದೀಗ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಲೆನಾಡಿನ ಹೆಬ್ಬಾಗಿಲು ಮಲೇಬೆನ್ನೂರಿನ ಕೊಮರನಹಳ್ಳಿ ಬಳಿ ಮಳೆ ಆಗ್ತಿರುವ ಕಾರಣ ಅಕಾಲಿಕ ಜಲಪಾತಗಳು ಸೃಷ್ಟಿ ಆಗಿವೆ. ಮಳೆಗಾಲದಲ್ಲಿ ಮಾತ್ರ ಸೃಷ್ಟಿಯಾಗುವ ಈ 'ಮಿಂಚೋಳಿ ಫಾಲ್ಸ್' ಭೋರ್ಗರೆಯುತ್ತಾ ದುಮ್ಮುಕ್ಕುತ್ತಿದ್ದು, ಜಲಪಾತದ ನಿನಾದ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.
ಮಲೆನಾಡಿನ ಹೆಬ್ಬಾಗಿಲು ಮಲೇಬೆನ್ನೂರಿನ ಮಿಂಚೋಳಿ ಫಾಲ್ಸ್ : ಮಲೆನಾಡಿನ ಹೆಬ್ಬಾಗಿಲು ಮಲೇಬೆನ್ನೂರು ಪಟ್ಟಣದ ಕಾನನದ ನಡುವೆ 'ಮಿಂಚೋಳಿ ಫಾಲ್ಸ್' ಸೃಷ್ಟಿಯಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಹಚ್ಚಹಸಿರಿನ ಹೊದಿಕೆ ಹೊತ್ತ ಅರಣ್ಯ ಪ್ರದೇಶದ ಬಂಡೆಗಳ ನಡುವೆ ಹರಿಯುತ್ತಿರುವ 'ಮಿಂಚೋಳಿ ಫಾಲ್ಸ್' ನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ.
ಗುಡ್ಡಗಾಡು ಪ್ರದೇಶದಿಂದ ಸರಿಸುಮಾರು 25 ಕಿ ಮೀ ದೂರದಿಂದ ಹರಿದುಬಂದು ಕಲ್ಲುಗಳ ಮಧ್ಯೆ ನೀರು ಧುಮ್ಮಿಕ್ಕುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಈ ಜಲಧಾರೆ ಪ್ರವಾಸಿಗರ ಮನಸ್ಸಿಗೆ ಆಹ್ಲಾದ ಮತ್ತು ಸಂಭ್ರಮವನ್ನು ಮೊಗೆ ಮೊಗೆದು ಕೊಡುತ್ತಿದೆ. ಈ ಜಲಪಾತದಲ್ಲಿ ಪ್ರತಿ ಮಳೆಗಾಲದಲ್ಲಿ ನೀರು ಧುಮ್ಮಿಕ್ಕುವ ಕಾರಣ 'ಮಿಂಚೋಳಿ ಫಾಲ್ಸ್' ಎಂಬ ಹೆಸರು ಬಂದಿದೆ. ಪ್ರಕೃತಿಯ ನಡುವೆ ಭೋರ್ಗರೆಯುತ್ತಾ ದುಮ್ಮಿಕ್ಕುತ್ತಿರುವ ಜಲಪಾತದ ದೃಶ್ಯ ಕಾವ್ಯವನ್ನ ವರ್ಣಿಸಲು ಪದಪುಂಜಗಳೇ ಸಾಲದು ಎಂದು ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಹೇಳುತ್ತಿದ್ದಾರೆ.
'ಮಿಂಚೋಳಿ' ಫಾಲ್ಸ್ಗೆ ಭೇಟಿ ನೀಡಲು ಹೋಗುವುದು ಹೇಗೆ ? : ದಾವಣಗೆರೆ ಜಿಲ್ಲೆಯ ಏಕೈಕ ಫಾಲ್ಸ್ ಆಗಿರುವ ಮಿಂಚೋಳಿ ಫಾಲ್ಸ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಸಾಕಷ್ಟು ಪ್ರವಾಸಿಗರು ವೀಕ್ ಎಂಡ್ನಲ್ಲಿ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡುವವರು ಸ್ವಂತ ವಾಹನದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಶಿವಮೊಗ್ಗ ರಸ್ತೆಯ ಮೂಲಕ ಸಂಚರಿಸಿ ಮಲೇಬೆನ್ನೂರು, ಬಳಿಕ ಕುಮಾರಹಳ್ಳಿ ದಾಟಿದ ತಕ್ಷಣ ಘಾಟ್ ಸೆಕ್ಷನ್ ಆರಂಭದ ಎರಡನೇ ತಿರುವಿನ ಬಲ ಭಾಗದಲ್ಲಿ ಇಳಿದ್ರೆ ಈ ಫಾಲ್ಸ್ ಸಿಗುತ್ತದೆ.
ಬಸ್ ಮೂಲಕ ಇಲ್ಲಿಗೆ ಬರುವವರು ಹರಿಹರದಿಂದ ಬಸ್ ಹಿಡಿದು ಕುಮಾರನಹಳ್ಳಿ ಘಾಟ್ ಸೆಕ್ಷನ್ ಬಳಿ ಬಸ್ ಇಳಿದು, ಸ್ವಲ್ಪ ದೂರ ಕ್ರಮಿಸಿ ಈ ಫಾಲ್ಸ್ ತಲುಪಬಹುದಾಗಿದೆ. ಸ್ವಂತ ವಾಹನ ಇದ್ದರೆ ಒಳ್ಳೆಯದು. ರಸ್ತೆಯಲ್ಲಿ ನಿಲ್ಲಿಸಿ ಸ್ವಲ್ಪ ದೂರ ಕ್ರಮಿಸುವುದು ಸೂಕ್ತ. ಕಿರಿದಾದ ದಾರಿ ಇರುವ ಕಾರಣ ಫಾಲ್ಸ್ ಬಳಿ ವಾಹನ ಹೋಗುವುದಿಲ್ಲ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸಿ ತೆರಳಬಹುದು.
ಕಾರಿಗನೂರು ಗ್ರಾಮದಲ್ಲೂ ಸೃಷ್ಟಿಯಾಗಿರುವ ಮಿನಿ ಫಾಲ್ಸ್ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಕಲ್ಲೇಶಪುರ ಬಳಿ ಚೆಕ್ ಡ್ಯಾಂನಲ್ಲಿ ಮಿನಿ ಫಾಲ್ಸ್ ಸೃಷ್ಟಿಯಾಗಿದೆ. ಕಾರಿಗನೂರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ಇದೀಗ ಮೈದುಂಬಿ ಹರಿಯುತ್ತಿದ್ದು, ಕೋಡಿ ಬಿದ್ದಿದೆ. ಇದರಿಂದಾಗಿ ಮಿನಿ ಫಾಲ್ಸ್ ವೊಂದು ಸೃಷ್ಟಿಯಾಗಿದೆ.
ದುರಂತ ಎಂದ್ರೆ ರಸ್ತೆ ಕೆಸರುಮಯವಾಗಿರುವುದರಿಂದ ವಾಹನಗಳಲ್ಲಿ ಇಲ್ಲಿಗೆ ತಲುಪಲು ಅಸಾಧ್ಯ. ಕಾರಿಗನೂರು ಗ್ರಾಮ ಬಳಿಯ ಕಲ್ಲೇಶಪುರ ಬಳಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬಹುದಾಗಿದೆ. ದಾವಣಗೆರೆಯಿಂದ 25 ಕಿಲೋ ಮೀಟರ್ ದೂರದಲ್ಲಿ ಈ ಮಿನಿ ಫಾಲ್ಸ್ ಇದ್ದು, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಚೆಕ್ ಡ್ಯಾಂ ಕೋಡಿ ಬಿದ್ದಿದ್ದು, ಇದೀಗ ಫಾಲ್ಸ್ ಸೃಷ್ಟಿಯಾಗಿದೆ. ಮಲೆನಾಡು ಭಾಗಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಚೆಕ್ ಡ್ಯಾಂಗೆ ಜೀವ ಕಳೆ ಬಂದಿದೆ. ಇದೀಗ ಪ್ರವಾಸಿಗರ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗಿದೆ.
ಪ್ರವಾಸಿಗರು ಹೇಳುವುದೇನು ?: ಗುಂಪು ಗುಂಪಾಗಿ ಪ್ರವಾಸಿಗರು ಫಾಲ್ಸ್ಗೆ ಭೇಟಿ ನೀಡುತ್ತಿದ್ದಾರೆ. ಧುಮ್ಮಿಕ್ಕುವ ನೀರನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. "ಮಲೆನಾಡಿನ ಹೆಬ್ಬಾಗಿಲು ಕಾನನದಲ್ಲಿ ಫಾಲ್ಸ್ ಸೃಷ್ಟಿ ಆಗಿದೆ. ಇದು ಜಿಲ್ಲೆಯ ಏಕೈಕ ಫಾಲ್ಸ್, ಇಲ್ಲಿಗೆ ವೀಕ್ ಎಂಡ್ನಲ್ಲಿ ಪ್ರವಾಸಗರು ಭೇಟಿ ನೀಡುತ್ತಿದ್ದಾರೆ. ಗುಡ್ಡದಿಂದ ನೀರು ಬರಲಿದೆ. ಫಿಲ್ಟರ್ ವಾಟರ್ ರೀತಿ ಇದೆ. ಇದಕ್ಕೆ ಮಿಂಚೋಳಿ ಫಾಲ್ಸ್ ಎಂದು ಹೆಸರು ಬಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಫಾಲ್ಸ್ ಸೃಷ್ಟಿ ಆಗುತ್ತೆ" ಎಂದು ಪ್ರವಾಸಿಗ ಕರಿಬಸಪ್ಪ ಮಾಹಿತಿ ನೀಡಿದ್ದಾರೆ.
'ಒಂದು ಒಳ್ಳೆಯ ಮಿನಿ ಫಾಲ್ಸ್ ಇದೆ. ಪ್ರತಿಯೊಬ್ಬರು ಈ ಒಳ್ಳೆಯ ವಾತಾವರಣವನ್ನು ಸವಿಯಿರಿ. ಇನ್ನೂ ಜೋರಾಗಿ ಮಳೆ ಬಂದರೆ ಒಂದು ಅದ್ಭುತ ಜಲಪಾತ ಸೃಷ್ಠಿಯಾಗುತ್ತೆ. ಮಲೆನಾಡಿಗೆ ಬರುವ ಪ್ರವಾಸಿಗರು ಈ ಜಲಪಾತಕ್ಕೆ ಬಂದು ಖುಷಿಯನ್ನು ಸವಿಯಿರಿ' ಎಂದು ಪ್ರವಾಸಿಗ ಪ್ರದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಗೊಡಚಿನಮಲ್ಕಿ ಜಲಪಾತದ ರುದ್ರರಮಣೀಯ ದೃಶ್ಯ: ಪ್ರವಾಸಿಗರು ಹೇಳಿದ್ದೇನು? - Godachinmalki Waterfalls