ಬೆಳಗಾವಿ: ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದ್ದು, ನೀರು ಧುಮ್ಮಿಕ್ಕುವ ಸ್ಥಳಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇಂದು ವೀಕೆಂಡ್ ಹಿನ್ನೆಲೆಯಲ್ಲಿ ಗೋಕಾಕ್ ಫಾಲ್ಸ್ಗೆ ಪ್ರವಾಸಿಗರ ದಂಡು ಆಗಮಿಸಿತ್ತು. ಈ ವೇಳೆ ಕೆಲವರು ನೀರು ಧುಮ್ಮಿಕ್ಕುವ ತುತ್ತ ತುದಿಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆದಿದ್ದಾರೆ. ಒಂದು ಚೂರು ಆಯ ತಪ್ಪಿದರೂ ಸಹ ಅಪಾಯ ಕಟ್ಟಿಟ್ಟ ಬುತ್ತಿ.
ಮಹಿಳೆಯರು, ಮಕ್ಕಳು ಸೇರಿದಂತೆ ಜಲಪಾತದ ತುದಿಯಲ್ಲಿ ಯುವಕರು ಈ ರೀತಿ ಹುಚ್ಚು ಸಾಹಸ ಮಾಡುತ್ತಿದ್ದಾರೆ. ಅಲ್ಲದೇ ಬಂಡೆಗಲ್ಲುಗಳ ಮೇಲೆ ಕುಳಿತು ಪ್ರವಾಸಿಗರು ಊಟ ಮಾಡುತ್ತಿರುವುದು ಕಂಡು ಬಂದಿದೆ. ಆದರೂ ಕೂಡ ಜಲಪಾತಕ್ಕೆ ಸೂಕ್ತ ಭದ್ರತೆ ಒದಗಿಸಬೇಕಿದ್ದ ಸ್ಥಳೀಯ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಜಲವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜಲಪಾತಗಳತ್ತ ಬರುತ್ತಿದೆ. ಹೀಗೆ ಬಂದವರು ದೂರದಿಂದ ಜಲಪಾತ ವೀಕ್ಷಿಸದೇ ಹುಚ್ಚು ಸಾಹಸ ಮಾಡುತ್ತಾ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.
ಇದನ್ನೂ ಓದಿ: ರಾಯಚೂರು: ರೈತರ ಮೇಲೆ ದಾಳಿ ಮಾಡಿದ ಚಿರತೆ ಹೊಡೆದು ಕೊಂದ ಜನರು - Mob Kills Leopard