ಹಾವೇರಿ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 159 ಮನೆಗಳಿಗೆ ಹಾನಿಯಾಗಿದೆ. ಸುಮಾರು 12 ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಮಳೆಯಿಂದ ಮನೆ ಕುಸಿದು ಸವಣೂರು ತಾಲೂಕಿನ ಮಾದಾಪುರದಲ್ಲಿ ಶುಕ್ರವಾರ ಮುಂಜಾನೆ ಮೂವರು ಸಾವನ್ನಪ್ಪಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರಿನಿಂದ 159 ಮನೆಗಳಿಗೆ ಹಾನಿಯಾಗಿದೆ. 7.78 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 16.43 ಕೋಟಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ರೂ. 5.75 ಕೋಟಿ ಸೇರಿ 22.18 ಕೋಟಿ ಅನುದಾನ ಲಭ್ಯವಿದೆ ಎಂದರು.
ಮಳೆ ವಿವರ: ಜಿಲ್ಲೆಯಲ್ಲಿ ಜನವರಿ 1ರಿಂದ ಜುಲೈ 20ರವರೆಗೆ ವಾಡಿಕೆ ಮಳೆ 350.50 ಮಿ.ಮೀ. ಇದ್ದು ಪ್ರಸ್ತುತ 345 ಮಿ.ಮೀ ಮಳೆಯಾಗಿದೆ. ಕಳೆದ ಏಳು ದಿನಗಳಿಂದ 41 ಮಿ.ಮೀ ವಾಡಿಕೆ ಮಳೆ ಇದ್ದು 77.50 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 6.00 ಮಿ.ಮೀ ವಾಡಿಕೆ ಮಳೆಗೆ 13.90 ಮಿ.ಮೀ. ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 159 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಒಂದು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, 154 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೂರು ಸದಸ್ಯರ ಸಮಿತಿಯಿಂದ ಹಾನಿಯಾದ ಮನೆಗಳ ಪರಿಶೀಲನೆ ಮಾಡಲಾಗುತ್ತಿದೆ. 14 ರೈತರ 7.78 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 5.18 ಹೆಕ್ಟೇರ್ ಬಾಳೆ, 2 ಹೆಕ್ಟೇರ್ ಬೆಳ್ಳುಳ್ಳಿ ಹಾಗೂ 0.60 ಹೆಕ್ಟೇರ್ ಹಾಗಲಕಾಯಿ ಬೆಳೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.
12 ರಸ್ತೆ ಸಂಪರ್ಕ ಕಡಿತ: ಜಿಲ್ಲೆಯಲ್ಲಿ ಒಟ್ಟು 12 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಹಾವೇರಿ ತಾಲೂಕಿನ ನಾಗನೂರ-ಕೂಡಲ ಹಾಗೂ ಕರ್ಜಗಿ-ಚಿಕ್ಕಮುಗದೂರ ಸೇತುವೆ ಮುಳುಗಡೆಯಾಗಿದೆ. ಸವಣೂರ ತಾಲೂಕಿನಲ್ಲಿ ಕಳಸೂರ-ಕೋಳೂರ ಸೇತುವೆ ಮೇಲೆ ನೀರು ಹರಿಯುತ್ತಿದೆ. ಚಿಕ್ಕಮುಗದೂರ-ಕರ್ಜಗಿ ಹಾಗೂ ಹಿರೇಮರಳಿಹಳ್ಳಿ-ಕೋಣತಂಬಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಹಾನಗಲ್ ತಾಲೂಕಿನ ಆಡೂರ-ತುಮರಿಕೊಪ್ಪ ರಸ್ತೆ ಮೇಲೆ, ಬಾಳಂಬೀಡ-ಲಕಮಾಪೂರ ರಸ್ತೆ ಮೇಲೆ ಹಾಗೂ ಕೂಡಲ-ನಾಗನೂರ ರಸ್ತೆ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ ಎಂದು ಡೀಸಿ ಹೇಳಿದರು.
ರಾಣೇಬೆನ್ನೂರ ತಾಲೂಕಿನ ಮುಷ್ಟೂರ-ಹೊಳೆಆನ್ವೇರಿ ಸೇತುವೆ, ಅಂತರವಳ್ಳಿ-ಲಿಂಗದಹಳ್ಳಿ ಸೇತುವೆ ಹಾಗೂ ಹಿರೇಮಾಗನೂರ-ಕೋಣನತಲಿ ಸೇತುವೆಯ ಮೇಲೆ ನೀರು ಹೆಚ್ಚಾಗಿರುವುದರಿಂದ ರಸ್ತೆ ಸಂಪರ್ಕ ಬಂದ್ ಆಗಿದೆ. ರಟ್ಟಿಹಳ್ಳಿ-ಯಲಿವಾಳ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕವಿದೆ. ನದಿ ಪ್ರವಾಹದಿಂದ ಮುಳುಗಿದ ಸೇತುವೆಗಳ ರಸ್ತೆ ಸಂಪರ್ಕ ಸ್ಥಗಿತವಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ನದಿ ಬಳಿ ಹೋಗದಂತೆ ಡಂಗುರ ಸಾರಿ ಜಾಗೃತಿ ಮೂಡಿಸಲಾಗಿದೆ. ನದಿ ಪಾತ್ರ -ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಕುಮುದ್ವತಿ ನದಿ ಪಾತ್ರದಲ್ಲಿ ಭಾರಿ ಮಳೆ: ಹಾವೇರಿಯ ಎಲಿವಾಳ ಸೇತುವೆ ಸಂಪೂರ್ಣ ಮುಳುಗಡೆ - Elivala bridge submerged