ಮಂಗಳೂರು: ಸೈಬರ್ ಕಿರುಕುಳದಿಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇಡ್ಯಾ ಗ್ರಾಮದ ಶಾರೀಕ್ ಬಂಧಿತ ಆರೋಪಿ. ಮಂಗಳೂರು ನಿವಾಸಿಯಾದ ಸಂತ್ರಸ್ತೆಯ ಫೇಸ್ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದು, ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಅವರ ಅಣ್ಣ ಮತ್ತು ಸ್ನೇಹಿತರಿಗೆ ಕಳುಹಿಸಲಾಗಿದೆ ಎಂಬ ದೂರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂದೇಶಗಳನ್ನು ಇಡ್ಯಾ ಗ್ರಾಮದ ಶಾರೀಕ್ ಎಂಬಾತ ಕಳುಹಿಸಿರುವುದಾಗಿ ಯುವತಿ ಮಾಹಿತಿ ನೀಡಿದ್ದಾರೆ.
ದೂರು ದಾಖಲಾದ ಬಳಿಕ, ಸುರತ್ಕಲ್ ಠಾಣೆಯ ಪೊಲೀಸರು ಪ್ರಕರಣ ಸಂಖ್ಯೆ 123/24 ಅಡಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ಕೇಸು ದಾಖಲಿಸಿದ್ದಾರೆ. ಶಾರೀಕ್ನನ್ನು ವಿಚಾರಣೆಗೆ ಕರೆಸಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆ ನಡೆಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ, ಸಂಬಂಧಿತ ಸಾಮಾಜಿಕ ಮಾಧ್ಯಮ ಕಂಪನಿಗಳಿಂದ ಹೆಚ್ಚಿನ ಮಾಹಿತಿ ಕೇಳಲಾಗಿದೆ.
24 ಅಕ್ಟೋಬರ್ 2024 ರಂದು, ಸಂತ್ರಸ್ತೆಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಆಕೆ ತೀವ್ರ ಮಾನಸಿಕ ತೊಂದರೆಗೊಳಗಾಗಿದ್ದರು. ಆ ಮನಸ್ಥಿತಿಯಲ್ಲಿ, ಶಾರೀಕ್ ಮತ್ತು ಅವರ ತಾಯಿ ನೂರ್ ಜಹಾನ್ ಅವರ ಕಿರುಕುಳದಿಂದ 25 ಅಕ್ಟೋಬರ್ 2024ರ ಮುಂಜಾನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಕ್ಷಣವೇ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಸಂತ್ರಸ್ತೆ, "ಶಾರೀಕ್ನ ನಿರಂತರ ಕಿರುಕುಳದಿಂದ ತಾನು ಭೀತಿಗೊಳಗಾಗಿದ್ದೇನೆ" ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಪ್ರಕರಣ ಸಂಖ್ಯೆ 125/24 ಅನ್ನು ಭಾರತೀಯ ದಂಡ ಸಂಹಿತೆಯ 78(1)(i), 351(1 & 2) ಮತ್ತು 3(5) ಸೆಕ್ಷನ್ ಅಡಿ ದಾಖಲಿಸಲಾಗಿದೆ. ಶಾರೀಕ್ನನ್ನು ಈಗಾಗಲೇ ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ತನ್ನನ್ನು ಪ್ರೀತಿಸುವಂತೆ ಅಪ್ರಾಪ್ತೆಗೆ ಪೀಡಿಸುತ್ತಿದ್ದ ಯುವಕನಿಗೆ ಮೂರು ವರ್ಷ ಜೈಲು!