ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ ಶುರುವಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ. ರಾಮೇಶ್ವರ ಕಫೆ ಸ್ಫೋಟದ ಬಳಿಕ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ಆರ್ಸಿಬಿ ಪಂದ್ಯ ತನ್ನ ತವರಿನಲ್ಲೇ ನಡೆಯುವುದರಿಂದ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ದಂಡು ಹರಿದುಬರಲಿದೆ. ಹೀಗಾಗಿ ಕಳೆದೊಂದು ವಾರದಿಂದ ಪೊಲೀಸರು ತೀವ್ರ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ಬಂದೋಬಸ್ತ್ಗಾಗಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿಯೇ ಪೊಲೀಸರು ಒಳ ಬಿಡಲಿದ್ದಾರೆ.
ಕ್ರಿಕೆಟ್ ಅಭಿಮಾನಿಗಳು ಗಮನಿಸಿ: ಈಗಾಗಲೇ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಸಂಪೂರ್ಣವಾಗಿ ತಪಾಸಣೆ ನಡೆಸಿವೆ. ಬಂದೋಬಸ್ತ್ಗಾಗಿ ಡಿ ಸ್ವಾಟ್, ಸಿ ಸ್ವಾಟ್ ಟೀಂಗಳ ಜೊತೆ, ಮೊಬೈಲ್ ಕಮಾಂಡ್ ಸೆಂಟರ್ ವೆಹಿಕಲ್, ನಾಲ್ಕು ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಡ್ರೋಣ್ ಮೂಲಕವೂ ಕಣ್ಗಾವಲಿರಿಸಲಾಗುತ್ತದೆ. ಅಲ್ಲದೇ ಸ್ಟೇಡಿಯಂನ ನಾಲ್ಕೂ ಕಡೆ ವಾಚ್ ಟವರ್ ನಿರ್ಮಿಸಿ ನಿಗಾ ವಹಿಸಲಾಗುತ್ತಿದೆ. ಸ್ಟೇಡಿಯಂನೊಳಗೆ ಎಂದಿನಂತೆ ಬ್ಯಾಗ್, ವಾಟರ್ ಬಾಟಲ್ ಸೇರಿ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಸಂಜೆ 5 ಗಂಟೆಗೆ ಬರಬೇಕು. ಐದು ಗಂಟೆಯಿಂದಲೇ ಸ್ಟೇಡಿಯಂ ಒಳಬಿಡಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.