ಮೈಸೂರು: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಸಮೀಪದ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ 5 ವರ್ಷದ ಗಂಡು ಹುಲಿ ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರ ಆತಂಕ ದೂರವಾಗಿದೆ. ಇತ್ತೀಚಿಗೆ ಚಿಕ್ಕನಹಳ್ಳಿ, ದೊಡ್ಡಕಾನ್ಯ, ಚಿಕ್ಕಕಾನ್ಯ ಬಳಿ ಹುಲಿ ಕಾಣಿಸಿಕೊಂಡಿತ್ತು. ಭಯಭೀತರಾಗಿದ್ದ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಿದ್ದ ಹುಲಿಯ ಚಲನವಲನಗಳನ್ನು ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ ಅರಣ್ಯಾಧಿಕಾರಿಗಳು, ಚಿಕ್ಕನಹಳ್ಳಿ ಜಮೀನಿನಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ ವಾಕ್‌ಥ್ರೋ ಬೋನ್ ಇಟ್ಟಿದ್ದರು. ಈ ಬೋನಿನಲ್ಲಿ ಹುಲಿ ಸೆರೆಯಾಗಿದೆ.
ಹುಲಿ ಬೋನಿಗೆ ಬೀಳುವುದು ಅಪರೂಪ: ಸ್ಥಳಕ್ಕೆ ಮೈಸೂರು ವೃತ್ತದ ಸಿಎ ಡಾ.ಮಾಲತಿ ಪ್ರಿಯಾ, ಡಿಸಿಎ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಹುಲಿಗಳು ಬೋನಿಗೆ ಬೀಳುವುದು ಅಪರೂಪದಲ್ಲೇ ಅಪರೂಪ.
ಕಳೆದ ವಾರ ಮೈಸೂರು ವಿಮಾನ ನಿಲ್ದಾಣದ ಸಮೀಪ ರಸ್ತೆ ಅಪಘಾತದಲ್ಲಿ ಹುಲಿಯೊಂದು ಮೃತಪಟ್ಟಿತ್ತು.
ಇದನ್ನೂ ಓದಿ: ಮೈಸೂರು: ಇಬ್ಬರ ಮೇಲೆ ದಾಳಿ ನಡೆಸಿದ ಹುಲಿ ಕೆಲವೇ ಗಂಟೆಗಳಲ್ಲಿ ಸೆರೆ