ಪಣಂಬೂರು(ದಕ್ಷಿಣ ಕನ್ನಡ): ಇಲ್ಲಿನ ಕಡಲ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಭಾನುವಾರ ನಡೆದಿದೆ. ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ಲಿಖಿತ್ (18), ಬೈಕಂಪಾಡಿಯ ಎಂಎಂಆರ್ ಕಂಪೆನಿಯ ಮೇಲ್ವಿಚಾರಕ ನಾಗರಾಜ್ (24) ಹಾಗೂ ಮೀಶೋ ಕಂಪೆನಿಯ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಿಲನ್ (20) ನೀರುಪಾಲಾದವರು.
ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಈ ಮೂವರು ಪಣಂಬೂರು ಸಮುದ್ರ ಕಿನಾರೆಯಲ್ಲಿ ಸಮುದ್ರದ ಅಲೆಗಳ ಜೊತೆ ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೈ ತೊಳೆಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮಗಳು: ರಕ್ಷಿಸಲು ಹೋದ ಹೆತ್ತವರೂ ನೀರುಪಾಲು
ಹೊಸಕೋಟೆಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಇಂದು ಒಂದೇ ಕುಟುಂಬದ ಮೂವರು ನೀರುಪಾಲಾಗಿದ್ದಾರೆ. ಪತಿ, ಪತ್ನಿ ಮತ್ತು ಮಗಳು ಮೃತಪಟ್ಟವರಾಗಿದ್ದಾರೆ.
ಮರಿಯಪ್ಪ (70), ಮುನಿಯಮ್ಮ (60) ಮತ್ತು ಭಾರತಿ (40) ಸಾವನ್ನಪ್ಪಿದವರು. ವಿಶೇಷಚೇತನಳಾಗಿದ್ದ ಮಗಳು ಕೈ ತೊಳೆಯಲು ಕೃಷಿ ಹೊಂಡಕ್ಕೆ ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ಆಕೆಯ ಹೆತ್ತವರು ಸಹ ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.