ಕಲಬುರಗಿ: ರಷ್ಯಾದಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗಕ್ಕೆಂದು ತೆರಳಿದ್ದ ಕಲಬುರಗಿಯ ಮೂವರು ಯುವಕರನ್ನು ಅಲ್ಲಿ ಸೇನೆಗೆ ನಿಯೋಜನೆ ಮಾಡಲಾಗಿದ್ದು ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯುವಕರ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದ ಸೈಯದ್ ಇಲಿಯಾಸ್ ಹುಸೇನಿ, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ಎಂಬ ಮೂವರು ಯುವಕರು ರಷ್ಯಾದಲ್ಲಿ ಸಿಲುಕಿದ್ದಾರೆ. ಮುಂಬೈ ಮೂಲದ ಬಾಬಾ ಎಂಬ ಎಜೆಂಟ್ವೊಬ್ಬರು ತಮ್ಮನ್ನು ಇಲ್ಲಿಗೆ ಕಳುಹಿಸಿದ್ದು, ಬಳಿಕ ಸೇನೆಯ ಕೆಲಸಕ್ಕೆ ಸೇರಿಸಲಾಗಿದೆ ಎಂದು ಅಲ್ಲಿಂದ ವಿಡಿಯೋ ಕಳಿಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಉಕ್ರೇನ್ ಬಾರ್ಡರ್ನಲ್ಲಿ ಸಿಲುಕಿಕೊಂಡ ಯುವಕರ ಕುಟುಂಬಸ್ಥರು ಸದ್ಯ ಕಣ್ಣೀರು ಹಾಕುತ್ತಿದ್ದಾರೆ. ಸೈಯದ್ ಇಲಿಯಾಸ್ ಹುಸೇನ್ ಅವರ ತಂದೆ ಹೆಡ್ ಕಾನ್ಸ್ಟೇಬಲ್ ನವಾಜ್ ಕಾಳಗಿ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿ ಮಕ್ಕಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ನೀವು ಹೇಳಿದ್ದು ಬೇರೆ, ಮಾಡಿದ್ದು ಮಾಡಿ ಬೇರೆ, ನಮ್ಮ ಮಕ್ಕಳು ಅಲ್ಲಿರುವುದು ಬೇಡ, ಅವರನ್ನು ನಮ್ಮ ಬಳಿ ಕಳಿಸಿಕೊಡಿ ಎಂದು ಎಜೆಂಟರ್ ಬಳಿ ಮಾತನಾಡಿದ್ದೇವೆ. ಅವರು ಕೇವಲ ಬರುತ್ತಾರೆಂದು ಹೇಳುತ್ತಿದ್ದಾರೆ ಹೊರತು ಮುಂದಿನ ಕ್ರಮ ಕೈಕೊಂಡಿಲ್ಲ ಎಂದು ಸೈಯದ್ ಇಲಿಯಾಸ್ ಹುಸೇನ್ ತಂದೆ ನವಾಜ್ ಕಾಳಗಿ ಬೇಸರ ವ್ಯಕ್ತಪಡಿಸಿದ್ದಾರೆ.
''ನನ್ನ ಮಗ ಸೇರಿದಂತೆ ಇಲ್ಲಿನ ಕೆಲವು ಹುಡುಗರು ಈ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷದ ಬಳಿಕ ಊರಿಗೆ ಮರಳಿದ್ದರು. ಇಲ್ಲಿಗೆ ಬಂದ ಬಳಿಕ ಅದೇಗೋ ಯುಟ್ಯೂಬ್ ವ್ಲಾಗ್ ಮಾಡುತ್ತಿದ್ದ ಮುಂಬೈ ಮೂಲದ ಏಜೆಂಟರ್ವೊಬ್ಬರ ಸಂಪರ್ಕ ಸಿಕ್ಕಿತ್ತು. ಇಂತಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಇದೆ ಎಂದು ಹೇಳಿ ಹುಡುಗರಿಗೆ ತಿಳಿಸಿದ್ದರು. ಅದರಂತೆ ನನ್ನ ಮಗ ಸೇರಿದಂತೆ ಹಲವರು ವೀಸಾ ಮತ್ತು ಪಾಸ್ಪೋರ್ಟ್ ಸಿದ್ಧಪಡಿಸಿಕೊಂಡು ಚೆನ್ನೈ ಮೂಲಕ ರಷ್ಯಾದ ಮಾಸ್ಕೋಗೆ ತೆರಳಿದರು. 5-6 ದಿನಗಳ ಬಳಿಕ ಸ್ಥಳ ತಲುಪಿರುವುದಾಗಿ ಫೋನ್ ಸಹ ಮಾಡಿದರು. ಆದರೆ, 15 ದಿನಗಳ ಬಳಿಕ ಮತ್ತೆ ಫೋನ್ ಮಾಡಿ ನಮ್ಮನ್ನು ಉಕ್ರೇನ್ ಬಾರ್ಡರ್ಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದರು. ಅನುಮಾನ ಬಂದಿತು. ಆ ಬಳಿಕ ಎಜೆಂಟರ್ಗಳು ಹೇಳಿದ್ದೊಂದು ಮಾಡಿದ್ದೊಂದು ಅಂತ ಗೊತ್ತಾಯಿತು. ಇವರ ಮೋಸದಿಂದ ನಮ್ಮ ಮಕ್ಕಳು ಇದೀಗ ಉಕ್ರೇನ್ ಬಾರ್ಡರ್ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ'' ಎಂದು ಸೈಯದ್ ತಂದೆ ಹೇಳಿದ್ದಾರೆ.
ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ಉಮೇಶ್ ಜಾಧವ್,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾಧಿಕಾರಿಗಳಿಗೂ ಭೇಟಿ ನೀಡಿ ನಮ್ಮ ಮನವಿ ಮಾಡಿರುವೆ. ಎಲ್ಲರೂ ಸಹಕರಿಸಿದ್ದಾರೆ. ನಮ್ಮ ಮಕ್ಕಳು ಸುರಕ್ಷತವಾಗಿ ಮರಳುವಲ್ಲಿ ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ಎಂದು ನವಾಜ್ ಮನವಿ ಮಾಡಿದ್ದಾರೆ. ಮಿಲಿಟರಿ ಸಮವಸ್ತ್ರಗಳನ್ನು ಹಾಕಿಸಿ ಅವರನ್ನು ಉಕ್ರೇನ್ ಗಡಿಯಲ್ಲಿ ನಿಲ್ಲಿಸಿದ್ದಾರೆ. ಅವರ ಜೀವಕ್ಕೆ ಅಪಾಯವಿದ್ದು, ಆದಷ್ಟು ಬೇಗ ಭಾರತಕ್ಕೆ ಕರೆತರುವ ಪ್ರಯತ್ನ ಮಾಡಬೇಕೆಂದು ಸಂಕಷ್ಟಕ್ಕೆ ಸಿಲುಕಿರುವ ಮತ್ತೊಬ್ಬ ಯುವಕನ ಸಹೋದರ ಮಹ್ಮದ ಪಾಷಾ ಮನವಿ ಮಾಡಿದ್ದಾರೆ.
ಕಲಬುರಗಿಯ ಮೂವರು ಯುವಕರೊಂದಿಗೆ ಭಾರತದ ಇನ್ನು ಹಲವರು ಇದೇ ರೀತಿ ರಷ್ಯಾದಲ್ಲಿ ಸಿಲುಕಿದ್ದು, ಎಲ್ಲರನ್ನು ರಕ್ಷಿಸಬೇಕೆಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಸಿಲುಕಿರುವ ಕಲಬುರಗಿ ಯುವಕರನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು: ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವಕರಿಗೆ ವಂಚಿಸಿ ರಷ್ಯಾ ವ್ಯಾಗನರ್ ಆರ್ಮಿಗೆ ಬಲವಂತವಾಗಿ ಸೇರಿಸಿರುವ ಮಾಹಿತಿ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಅಮಾಯಕರನ್ನ ಕರೆದುಕೊಂಡು ಹೋಗಿದ್ದಾರೆ. ರಷ್ಯಾ ವ್ಯಾಗ್ನರ್ ಗ್ರೂಪ್ಗೆ ಜಾಯಿನ್ ಮಾಡಿಕೊಂಡಿದ್ದಾರಂತೆ. ಈ ವಿಷಯವಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜೊತೆ ರಾತ್ರಿ ಮಾತಾಡಿದ್ದೇನೆ. ವಿದೇಶಾಂಗ ಸಚಿವರಿಗೆ ಮಾತನಾಡಿ ಅಂತಾ ಹೇಳಿದ್ದೇನೆ. ಅವರು ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.