ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಠಾಣೆಗೆ ದೂರು ನೀಡಲು ಬಂದು, ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಬುಧವಾರ ಘಟನೆ ನಡೆದಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆಯೇಷಾ ತಾಜ್, ಫೌಜಿಯಾ ಹಾಗೂ ಆರ್ಬಿನ್ ತಾಜ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಶೋಯೆಬ್ ಹಾಗೂ ನಾಸೀರ್ ಎಂಬುವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಯಲ್ಲೇ ಗಲಾಟೆ: ಹಣಕಾಸಿನ ವಿಚಾರಕ್ಕಾಗಿ ಮೂವರು ಮಹಿಳೆಯರು ಹಾಗೂ ಶೋಯೆಬ್ ನಡುವೆ ಸಂಘರ್ಷ ಉಂಟಾಗಿಗ್ತು. ಫೈನಾನ್ಸಿಯರ್ ಆಗಿದ್ದ ನಾಸೀರ್, 25 ಸಾವಿರ ರೂ. ಹಣ ಕೊಟ್ಟಿದ್ದ. ಇದೇ ವಿಚಾರಕ್ಕಾಗಿ ಪರಸ್ಪರರು ನಿಂದಿಸಿಕೊಂಡು ನಿನ್ನೆ ಠಾಣೆಗೆ ಬಂದಿದ್ದರು. ಬಳಿಕ ದೂರು ನೀಡದೆ ಪರಸ್ಪರರು ಠಾಣೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವೇಳೆ ಪೊಲೀಸರು ಸಮಾಧಾನದಿಂದ ಇರುವಂತೆ ಸೂಚಿಸಿದರೂ ಮತ್ತೆ ಕ್ಯಾತೆ ತೆಗೆದು ಜಗಳವಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಹಿಳಾ ಪಿಎಸ್ಐ ರೇಖಾ ಸೇರಿದಂತೆ ಇನ್ನಿತರ ಮಹಿಳಾ ಕಾನ್ಸ್ಟೇಬಲ್ಗಳು ಬಿಡಿಸಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿತರು ಸಮವಸ್ತ್ರದಲ್ಲಿದ್ದ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಮಹಿಳಾ ಸಿಬ್ಬಂದಿಯ ಮೇಲೆಯೂ ಕೈ ಮಾಡಿ, ಪರಚಿ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ. ಪ್ರಶ್ನಿಸಲು ಮುಂದಾದಾಗ ನಾವು ಮಾನವ ಹಕ್ಕುಗಳ ಸಂಘಟನೆಯವರಾಗಿದ್ದು, ನಮ್ಮ ಮೇಲೆ ಕೈ ಮಾಡಿದರೆ ಸರಿ ಇರುವುದಿಲ್ಲ ಎಂದು ತುಚ್ಛವಾಗಿ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪಾಗಿ ಹೆಸರು ಹಾಗೂ ವಿಳಾಸ ನೀಡಿ ಸುಳ್ಳು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಇನ್ಸ್ಪೆಕ್ಟರ್ ಮೇಲೆಯೂ ಹಲ್ಲೆ ಆರೋಪ: ಜ್ಞಾನಭಾರತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿ ಅವರ ಮೇಲೆಯೂ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಜಗಳ ಬಿಡಿಸಲು ಹೋದಾಗ ಮಹಿಳಾ ಆರೋಪಿತರು ಇನ್ಸ್ಪೆಕ್ಟರ್ ಮೇಲೆ ಕೈ ಮಾಡಿದ್ದಾರೆ. ಈ ಬಗ್ಗೆ ಮಹಿಳಾ ಪಿಎಸ್ಐ ನೀಡಿದ ದೂರಿನಂತೆ ದಾಖಲಾದ ಎಫ್ಐಆರ್ನಲ್ಲಿ ಹಲ್ಲೆಗೊಳಗಾದವರ ಪಟ್ಟಿಯಲ್ಲಿ ಇನ್ಸ್ಪೆಕ್ಟರ್ ಹೆಸರನ್ನೂ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗದಗ: ಸ್ಥಳ ಮಹಜರು ವೇಳೆ ಪೊಲೀಸ್ ಮೇಲೆ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು - Gadag Firing