ಬಾಗಲಕೋಟೆ: ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ನವನಗರದ ಅಬಕಾರಿ ಇಲಾಖೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ವೈದ್ಯೆ ಕೃತಿಕಾ ಒಂಟಕುದರಿ (32), ಸ್ನೇಹಿತೆ ರಜನಿ ಒಂಟಕುದರಿ (34), ಅಭಿಷೇಕ ಬಂಡಿವಡ್ಡರ ಮೃತರು.
ಸ್ಕೂಟಿಯಲ್ಲಿದ್ದ ಗೆಳತಿಯರಿಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದರೆ. ಇನೊಂದು ಬೈಕ್‌ನಲ್ಲಿದ್ದ ಇಬ್ಬರು ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಕೃತಿಕಾ ಖಾಸಗಿ ಆಸ್ಪತ್ರೆಯಲ್ಲಿ ದಂತ ವೈದ್ಯೆ ಆಗಿದ್ದರು. ರಜನಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಅಪಘಾತ ಸಂಭವಿಸಿದ್ದೇಗೆ: ಕೆಲಸ ಮುಗಿಸಿ ಸ್ನೇಹಿತೆ ಜೊತೆಗೆ ಸ್ಕೂಟಿಯಲ್ಲಿ ಹೊರಟಿದ್ದ ವೇಳೆ ಬೈಕ್ನಲ್ಲಿ ಕಾಳಿದಾಸ್ ಸರ್ಕಲ್ ನಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿದ್ದ ಯುವಕರು ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ರಜನಿ, ಅಭಿಷೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಕೃತಿಕಾ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.