ಹಾವೇರಿ : ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಹಾವೇರಿ ಜಿಲ್ಲೆಯಲ್ಲಿ ನಿರಂತರ ಸಾಧಾರಣ ಮಳೆಯಾಗುತ್ತಿದೆ. ನಿರಂತರ ಜಿಟಿಜಿಟಿ ಮಳೆಗೆ ಜಿಲ್ಲೆಯಲ್ಲಿ ಮೂರು ಮನೆಗಳ ಗೋಡೆಗಳು ಕುಸಿತಗೊಂಡಿವೆ. ಗಣೇಶ ಗ್ರಾಮ ಎಂದು ಕರೆಯುವ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗ್ರಾಮದ ಮಹಾದೇವಿ ತಳವಾರ ಎಂಬುವರಿಗೆ ಸೇರಿದ ಮನೆಯ ಗೋಡೆಯು ಬಿದ್ದಿದೆ.
ಗಣೇಶ ಚತುರ್ಥಿಗೆ ಎಂದು ಸಿದ್ದಪಡಿಸಿ ಇಡಲಾಗಿದ್ದ ಗಣಪತಿ ಮೂರ್ತಿಗಳು ಹಾಳಾಗಿವೆ. ಕಳೆದ ಮೂರು ತಿಂಗಳಿನಿಂದ ಗಣೇಶ ಹಬ್ಬಕ್ಕೆ ಮಾರಾಟ ಮಾಡಲು ಮೂರ್ತಿಗಳನ್ನ ಮಾಡಿದ್ದರು. ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಗಣಪತಿ ಮೂರ್ತಿಗಳು ಹಾಳಾಗಿವೆ.
ಮನೆಯ ಐದು ಜನ ಕುಟುಂಬದ ಸದಸ್ಯರು ಹಗಲು ರಾತ್ರಿ ಎನ್ನದೆ ಗಣಪತಿ ಮೂರ್ತಿಗಳನ್ನ ಮಾಡಿದ್ದರು. ಈಗ ಮೂರ್ತಿಗಳು ಸಂಪೂರ್ಣ ಹಾಳಾಗಿದ್ದು, ಜಿಲ್ಲಾಡಳಿತ ಪರಿಹಾರ ಘೋಷಣೆ ಮಾಡುವಂತೆ ಕುಟುಂಬ ಒತ್ತಾಯ ಮಾಡಿದೆ. ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಮಾರುತಿ ಮೂಲಂಗಿ ಎಂಬುವರ ಮನೆಯ ಗೋಡೆ ಬಿದ್ದು ಮನೆಗೆ ಹಾನಿಯಾಗಿದೆ.
ರಟ್ಟಿಹಳ್ಳಿ ತಾಲೂಕಿನ ಮೇದೂರು ಗ್ರಾಮದ ರೇಷ್ಮಾ ನ್ಯಾಮತಿ ಎಂಬುವರ ಮನೆಯ ಗೋಡೆ ಕುಸಿತವಾಗಿದ್ದು, ಕುಟುಂಬ ಸದಸ್ಯರು ಅದೃಷ್ಟವಶಾತ್ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.