ರಾಯಚೂರು: ಬೈಕ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ರಾಯಚೂರಿನ ವೈಟಿಪಿಎಸ್ ವಿದ್ಯುತ್ ಕೇಂದ್ರದ ಬಳಿ ಇಂದು ನಡೆದಿದೆ. ಜನಾರ್ದನ (27), ಸಿ.ಬಿ.ಪಾಟೀಲ್(27) ಮೃತಪಟ್ಟವರೆಂದು ಗುರುತಿಸಲಾಗಿದೆ.
ರಾಯಚೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರಿಬ್ಬರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಬ್ಬದ ದಿನ ತಂಗಿ ಸಾವು: ಹಬ್ಬದ ದಿನದಂದು ದ್ವಿಚಕ್ರವಾಹನ ಮತ್ತು ಕಾರು ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ತಂಗಿ ಸಾವನ್ನಪ್ಪಿ, ಅಕ್ಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ಶನಿವಾರ ನಡೆದಿದೆ. ನಗರದ ನಿವಾಸಿ ಬಸವರಾಜ್ ಎಂಬುವರ ಪುತ್ರಿ ಸಾಕ್ಷಿ (20) ಮೃತರು. ಇವರ ಅಕ್ಕ ಸಂಜನಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ಅಕ್ಕ ತಂಗಿ ದ್ವಿಚಕ್ರವಾಹನದಲ್ಲಿ ರಾಯಚೂರು ನಗರದಿಂದ ತಮ್ಮ ಮನೆಗೆ ಲಿಂಗಸೂಗುರು ರಸ್ತೆಯಲ್ಲಿ ತೆರಳುತ್ತಿದ್ದರು. ಇನ್ನೊಂದು ಬದಿಯಲ್ಲಿ ಅಸ್ಕಿಹಾಳ ಕಡೆಯಿಂದ ಕಾರು ಬರುತ್ತಿತ್ತು. ಈ ವೇಳೆ ಬಸವ ಆಸ್ಪತ್ರೆ ಬಳಿಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ತಂಗಿ ಸಾಕ್ಷಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನ ಚಲಾಯಿಸುತ್ತಿದ್ದ ಸಂಜನಾ ಗಾಯಗೊಂಡಿದ್ದಾರೆ ಎಂದು ಸಂಚಾರಿ ಪೊಲೀಸ್ ತಿಳಿಸಿದ್ದಾರೆ.
ಅಪಘಾತ ಘಟನೆಯ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಧಾರವಾಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಸೇತುವೆ: ಹಗ್ಗವೇ ಜನರಿಗಿಲ್ಲಿ ಆಸರೆ
ಸಿಗಂದೂರಿಗೆ ಹೊರಟಿದ್ದ ಕಾರು ಪಲ್ಟಿ: ಓರ್ವ ಸಾವು: ಮೂವರಿಗೆ ಗಾಯ
ಬೆಂಗಳೂರಿನಿಂದ ಸಿಗಂದೂರಿ ದೇವಿಯ ದರ್ಶನಕ್ಕೆ ಹೊರಟಿದ್ದ ಸ್ನೇಹಿತರಿದ್ದ ಕಾರು ಪಲ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಚಂದನ್(26) ಎಂಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕುಂಸಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಶನಿವಾರ ರಾತ್ರಿ ಬೆಂಗಳೂರಿನ ನೆಲಮಂಗಲದ ಚಂದನ್, ಈತನ ಸ್ನೇಹಿತರಾದ ಕೋಲಾರ ಮೂಲದ ಕೋದಂಡ, ಮಂಡ್ಯ ಮೂಲದ ಭರತ್ ಹಾಗೂ ಹಾಸನ ಮೂಲದ ಯೋಗೇಶ್ ಎಂಬುವರು ಸಾಗರ ತಾಲೂಕು ಸಿಗಂದೂರಿಗೆ ಹೊರಟಿದ್ದರು.
ಇಂದು ಬೆಳಗ್ಗೆ ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ಕೆರೆ ನೀರು ಕೋಡಿ ಹರಿಯುವ ಸ್ಥಳದ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಚಂದನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದಂತೆ ಭರತ್ಗೆ ಕಾಲು ಮುರಿದಿದೆ. ಉಳಿದ ಇಬ್ಬರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಬರುವ ಕಾರುಗಳ ಅಪಘಾತ ಹೆಚ್ಚು: ಶಿವಮೊಗ್ಗ ಜಿಲ್ಲೆ ಮಲೆನಾಡು. ಶಿವಮೊಗ್ಗದಿಂದ ಸಾಗರದ ತನಕ ರಾಷ್ಟ್ರೀಯ ಹೆದ್ದಾರಿ ಇದ್ದರೂ ಸಹ ಮಲೆನಾಡಿಗೆ ತಕ್ಕಂತೆ ರಸ್ತೆ ಅಂಕುಡೂಂಕು ಇರುತ್ತದೆ. ಬೆಂಗಳೂರು ಸೇರಿದಂತೆ ಇತರೆ ಕಡೆಯಿಂದ ಬರುವ ವಾಹನ ಚಾಲಕರಿಗೆ ಹೈವೇ ಅಂದ್ರೆ ನೇರವಾಗಿರುತ್ತದೆ ಎಂಬ ಭಾವನೆ ಇರುತ್ತದೆ. ಇದರಿಂದ ವಾಹನ ಚಲಾಯಿಸುವವರು ವೇಗವಾಗಿ ಬಂದು ತಿರುವುಗಳಲ್ಲಿ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಬೀಳುವುದೇ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವೇಗ ಮಿತಿ, ತಿರುವು, ಅಪಘಾತ ವಲಯ ಎಂದು ಬೋರ್ಡ್ ಹಾಕಿದ್ದರೂ ಸಹ ಅದನ್ನು ನೋಡದೇ ವೇಗವಾಗಿ ವಾಹನ ಚಲಾವಣೆಯಿಂದ ಇಂತಹ ಅನಾಹುತgಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: 'ಫಸ್ಟ್ ಬಾಲ್ನಲ್ಲಿ ಸಿಕ್ಸರ್ ಹೊಡೆದವರು ನಾವು': ಅ.16ಕ್ಕೆ 'ಮಾಫಿಯಾ' ನಿಮ್ಮ ಮುಂದೆ