ಬೆಂಗಳೂರು: ವ್ಯಾಲೆಂಟೈನ್ಸ್ ಡೇ ವಿಶೇಷವೇ ಗುಲಾಬಿ. ಪ್ರೇಮಿಗಳ ದಿನದಂದು ಅದೆಷ್ಟೋ ಬಣ್ಣ ಬಣ್ಣದ ಹೂವುಗಳು ಮಾರಾಟವಾಗುತ್ತವೆ. ಪ್ರೇಮಿಗಳು ಗುಲಾಬಿ ಹೂವುಗಳ ಮೂಲಕ ಪ್ರೇಮ ನಿವೇದನೆ ಮಾಡಿದರೆ, ಬೆಳೆಗಾರರಿಗಂತೂ ಹೂಗಳು ತಂದುಕೊಡುವ ಲಾಭದ ಖುಷಿ. ಪ್ರತೀ ವರ್ಷ ಪ್ರೇಮಿಗಳ ದಿನಕ್ಕೆ ಟನ್ಗಟ್ಟಲೆ ಗುಲಾಬಿ ಹೂವುಗಳು ಮಾರಾಟ ಹಾಗೂ ಇತರ ರಾಜ್ಯ, ವಿದೇಶಕ್ಕೂ ರಫ್ತಾಗುತ್ತವೆ. ಈ ಬಾರಿ ಪ್ರೇಮಿಗಳ ದಿನದ ಅಂಗವಾಗಿ ನಗರದಿಂದ ವಿದೇಶಗಳಿಗೆ ಕೋಟ್ಯಂತರ ರೂಪಾಯಿಯ ಗುಲಾಬಿಗಳು ರಫ್ತಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಫ್ತಿನ ಪ್ರಮಾಣ ಹೆಚ್ಚಾಗಿದೆ.
ವಿಮಾನಗಳ ಮೂಲಕ 12,22,860 ಕೆ.ಜಿ ತೂಕದ ಸುಮಾರು 2.9 ಕೋಟಿ ಗುಲಾಬಿ ಹೂಗಳು ಹೊರ ರಾಜ್ಯಕ್ಕೆ ಮತ್ತು ವಿದೇಶಗಳಿಗೆ ರಫ್ತಾಗಿವೆ. ಈ ವರ್ಷ ಶೇ.108ರಷ್ಟು ರಫ್ತಿನ ಪ್ರಮಾಣ ಹೆಚ್ಚಾಗಿದೆ. ಹೊರ ರಾಜ್ಯಗಳಿಗೆ 2 ಕೋಟಿ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.148 ರಷ್ಟು ಹೆಚ್ಚಳವಾದಂತಾಗಿದೆ.
ಗುಲಾಬಿ ಹೂವುಗಳು ಸಿಲಿಕಾನ್ ಸಿಟಿಯಿಂದ ಮಲೇಷ್ಯಾ, ಸಿಂಗಾಪುರ್, ಕುವೈತ್, ಮನಿಲಾ (ಫಿಲಿಪೈನ್), ಮತ್ತು ಶಾರ್ಜಾ (ಯುಎಇ) ದೇಶಗಳಿಗೆ ರಫ್ತಾಗಿವೆ. ಇನ್ನು ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ ಮತ್ತು ಜೈಪುರ ರಾಜ್ಯಗಳಿಗೆ ಕೂಡ ರವಾನೆಯಾಗಿದೆ.
2021-22ನೇ ಸಾಲಿನಲ್ಲಿ 23,597 ಮೆಟ್ರಿಕ್ ಟನ್ ಹೂವು ರಫ್ತು: 2021-22ನೇ ಸಾಲಿನಲ್ಲಿ ಭಾರತವು 23,597.17 ಮೆಟ್ರಿಕ್ ಟನ್‌ಗಳಷ್ಟು ವಿವಿಧ ಹೂಗಳ ಉತ್ಪನ್ನಗಳನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಇದರ ಒಟ್ಟು ಮೌಲ್ಯ 771.41 ಕೋಟಿಗಳಷ್ಟಾಗಿತ್ತು. ಅದೇ ವರ್ಷದಲ್ಲಿ, ಭಾರತವು 2.1 ಮಿಲಿಯನ್ ಟನ್‌ಗಳಷ್ಟು ಸಡಿಲ ಹೂವುಗಳನ್ನು ಮತ್ತು 0.8 ಮಿಲಿಯನ್ ಟನ್‌ಗಳಷ್ಟು ಕತ್ತರಿಸಿದ ಹೂವುಗಳನ್ನು ಉತ್ಪಾದಿಸಿತ್ತು.
"ಬೆಂಗಳೂರಿನ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆ ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಂದ ಗುಣಮಟ್ಟದ ಗುಲಾಬಿಗಳನ್ನು ಕಳುಹಿಸಲಾಗಿತ್ತು. ಗುಲಾಬಿ ಬೆಳೆಗೆ ತೋಟಗಾರಿಕೆ ಇಲಾಖೆ ನೆರವಿನಿಂದ ಅನೇಕ ರೈತರು ಸಬ್ಸಿಡಿ ಆಧಾರದಲ್ಲಿ ಹಸಿರುಮನೆಗಳನ್ನು ನಿರ್ಮಿಸಿಕೊಂಡಿದ್ದು, ಪ್ರತಿ ವರ್ಷ ಲಾಭ ಕಾಣುತ್ತಿದ್ದಾರೆ" ಎಂದು ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್ ತಿಳಿಸಿದ್ದಾರೆ.
ಅತಿಹೆಚ್ಚು ಗುಲಾಬಿ ಹೂ ಬೆಳೆಯುವ ರಾಜ್ಯ: "ಭಾರತವು ಅತಿದೊಡ್ಡ ಹೂಗಳ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ , ಅಸ್ಸಾಂ ಮತ್ತು ತೆಲಂಗಾಣಗಳಲ್ಲಿ ಹೆಚ್ಚಿನ ಹೂವುಗಳನ್ನು ಬೆಳೆಯಲಾಗುತ್ತಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬರದ ನಾಡಿನಲ್ಲಿ ಅರಳಿದ ಗುಲಾಬಿ: ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಹೆಚ್ಚಿದ ಬೇಡಿಕೆ, ರೈತರಿಗೆ ಸಂತಸ