ಬೆಂಗಳೂರು: ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಆಡ್ವರ್ಟೈಸಿಂಗ್ ಲಿಮಿಟೆಡ್ (ಕೆಎಸ್ಎಂಸಿಎ)ನ ಹಣಕಾಸು ಮತ್ತು ಲೆಕ್ಕಪತ್ರ ಕಾರ್ಯಗಳ ದಾಖಲೆಗಳ ಸರ್ವರ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಡೇಟಾ ಕಳುವು ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಡೇಟಾ ಸೋರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿರುವ ಕೆಎಸ್ಎಂಸಿಎನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅತೀಕುಲ್ಲಾ ಷರೀಫ್ ಅವರು ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗಸ್ಟ್ 7ರಂದು ಸರ್ವರ್ ಹ್ಯಾಕ್ ಮಾಡಿರುವ ಆರೋಪಿಗಳು, 'Your data has been Stolen and encrypted! Email Us ithelp24ok@aol.com or ithelp24ok@cyberfear.com' ಎಂದು ಬಿತ್ತರಿಸುತ್ತಿದ್ದಾರೆ. ಅಲ್ಲದೇ, ಸರ್ವರ್‌ನಲ್ಲಿರುವ File type-ZBRT ಎಂದು ತೋರಿಸುತ್ತಿದ್ದು 'We downloaded to our servers and encrypted all your database and personal information' ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ ಡಾಟಾ ಬಿಡುಗಡೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದು ತಪ್ಪಿದರೆ ಮಾಹಿತಿ ಸೋರಿಕೆ ಹಾಗೂ ಡೇಟಾ ನಾಶಪಡಿಸುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನನ್ವಯ ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.