ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಗಮನ ಬೇರೆಡೆ ಸೆಳೆದು ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದ ಹೊರರಾಜ್ಯದ ಇಬ್ಬರು ಕಳ್ಳಿಯರನ್ನು ಬಂಧಿಸಿರುವ ಕೆ.ಆರ್.ಪುರ ಠಾಣೆ ಪೊಲೀಸರು, 80 ಲಕ್ಷ ಮೌಲ್ಯದ 899 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶ ಚಿತ್ತೂರು ಮೂಲದ ಲಾವಣ್ಯ ಮತ್ತು ಮೀನಾ ಬಂಧಿತರು. ಈ ಮೂಲಕ ಕೆ.ಆರ್. ಪುರ, ಮಹದೇವಪುರ, ಯಶವಂತಪುರ ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಎಂಟು ಪ್ರಕರಣಗಳನ್ನು ಭೇದಿಸಿದಂತಾಗಿದೆ.
ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ನಗರದ ಜನಜಂಗುಳಿಯಿರುವ ವಿವಿಧ ಬಸ್ ನಿಲ್ದಾಣಗಳ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚುತ್ತಿದ್ದರು.
ಕೃತ್ಯವೆಸಗುತ್ತಿದ್ದಂತೆ ಬಸ್ನಿಂದ ಇಳಿದು ಎಸ್ಕೇಪ್ ಆಗುತ್ತಿದ್ದರು. ಇತ್ತೀಚೆಗೆ ಕೆ.ಆರ್.ಪುರ ಬಸ್ ನಿಲ್ದಾಣದ ಮಹಿಳೆಯೊಬ್ಬರು ಬಸ್ ಹತ್ತುವಾಗ ಬ್ಯಾಗ್ನಲ್ಲಿದ್ದ 156 ಗ್ರಾ ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಸಂಬಂಧ ಕೆ.ಆರ್. ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಗಾಂಧಿ ನಗರದಲ್ಲಿ ಲಾಡ್ಜ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬ್ರ್ಯಾಂಡೆಡ್ ಫುಟ್‌ವೇರ್ಸ್ ಕಳ್ಳತನ: 10 ಲಕ್ಷದ ಮಾಲುಸಮೇತ ಕೊನೆಗೂ ಸಿಕ್ಕಿಬಿದ್ದ ಖದೀಮರು - Footwear Thieves Arrested