ಚಾಮರಾಜನಗರ: ಮನೆಯೊಡತಿ ಬೆಂಗಳೂರಿಗೆ ಶ್ರಾದ್ಧಕ್ಕೆಂದು ತೆರಳಿದ್ದಾಗ ಕಳ್ಳರು ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ನಗದು, ಅಪಾರ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಘಟನೆ ಚಾಮರಾಜನಗರದ ಸಿದ್ಧಾರ್ಥ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ಕುಮಾರ್ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, 5.5 ಲಕ್ಷ ನಗದು, 750 ಗ್ರಾಂ ಚಿನ್ನಾಭರಣ ಮತ್ತು 15 ಕೆ.ಜಿಯಷ್ಟು ಬೆಳ್ಳಿ ಸಾಮಗ್ರಿ, ಟ್ಯಾಬ್ಲೆಟ್ ಮತ್ತು ಫೋನ್, ಸಾವಿರಾರು ರೂಪಾಯಿ ಬೆಲೆಬಾಳುವ 40 ಸೀರೆಗಳನ್ನು ಕದ್ದೊಯ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಾಗಿಲು ಮೀಟಿ ನಗ, ನಾಣ್ಯ ದೋಚಿದ್ದಾರೆ.
ಮನೆಯಲ್ಲಿಟ್ಟಿದ್ದ ಚಾಕೊಲೇಟ್ಗಳನ್ನು ತಿನ್ನುತ್ತಾ ಕಳ್ಳರು ಎಲ್ಲವನ್ನೂ ತಡಕಾಡಿದ್ದಾರೆ. 250 ಗ್ರಾಂನಷ್ಟಿದ್ದ ಸಣ್ಣ ಒಡವೆಗಳು, ಮೂಗುತಿ, ಓಲೆಗಳನ್ನು ಅಲ್ಲೇ ಬಿಟ್ಟಿದ್ದಾರೆ.
ಎಸ್ಪಿ ಪರಿಶೀಲನೆ: ಕಳ್ಳತನದ ಮಾಹಿತಿ ಮೇರೆಗೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಬುಧವಾರ ರಾತ್ರಿ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿ ಪಡೆದರು.
ಶ್ವಾನದಳ, ಬೆರಳಚ್ಚು ತಂಡಗಳೂ ಮನೆಗೆ ಭೇಟಿ ಕೊಟ್ಟು ಕಳ್ಳರ ಜಾಡು ಬೇಧಿಸಲು ಮುಂದಾಗಿವೆ. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ''ರೇಣುಕಾ ಶ್ರೀನಿವಾಸ್ ಕುಮಾರ್ ಅವರ ಮನೆಯಲ್ಲಿ ರಾತ್ರಿ ಕಳ್ಳತನ ನಡೆದಿದೆ. ಮನೆಯ ಮುಂಬಾಗಿಲನ್ನು ಮೀಟಿ ಒಳಪ್ರವೇಶಿಸಿ ಅಮೂಲ್ಯವಾದ ವಸ್ತುಗಳನ್ನು ಕದ್ದುಕೊಂಡು ಹೋಗಿದ್ದಾರೆ. ಈ ಬಗ್ಗೆ ದೂರು ಕೊಟ್ಟಿದ್ದಾರೆ. ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚುತ್ತೇವೆ'' ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು : ಸರಣಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಖದೀಮರ ಬಂಧನ - INTER DISTRICT THIEF ARRESTED