ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ತಿಂಗಳ ಹಿಂದೆ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ಜರುಗಿತ್ತು. ಈ ದೇವಸ್ಥಾನದ ಹುಂಡಿಗೆ ಭಾರಿ ಪ್ರಮಾಣದ ದೇಣಿಗೆ ಬಂದಿದೆ ಎಂದು ಹೊಂಚು ಹಾಕಿದ್ದ ಕಳ್ಳರು, ನಿನ್ನೆ (ಮಂಗಳವಾರ) ರಾತ್ರಿ ಹುಂಡಿಯಲ್ಲಿ ಹಣ ಕದಿಯಲು ಯತ್ನಿಸಿದ್ದಾರೆ. ಆದ್ರೆ, ಈ ವೇಳೆ ಅವರ ಯತ್ನ ವಿಫಲವಾಗಿದೆ. ಆದ್ರೆ ಬರಿಗೈಯಲ್ಲಿ ವಾಪಸ್ ಹೋಗದ ಕಳ್ಳರು, ಪಕ್ಕದ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ, ಚಿನ್ನ ತಾಳಿ ಕದ್ದೊಯ್ದಿದ್ದಾರೆ.
![Thieves attempt Doddaballapura Prasanna Venkataramanaswamy temple](https://etvbharatimages.akamaized.net/etvbharat/prod-images/20-03-2024/kn-bng-01-theft-avb-ka10057_19032024164422_1903f_1710846862_625.jpeg)
ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿ ಕಳೆದ ರಾತ್ರಿ ಸರಣಿ ಕಳತನದ ಪ್ರಕರಣಗಳು ನಡೆದಿವೆ. ಮೊದಲಿಗೆ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು, ಎರಡು ಬೆಳ್ಳಿ ಕಿರೀಟ, ಒಂದು ತಾಳಿ ಕದ್ದು ಪರಾರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕಳ್ಳರು ಪಕ್ಕದ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೂ ನುಗ್ಗಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿರುವ ಕಿಂಡಿಯ ಮೂಲಕ ಒಳಗೆ ನುಗ್ಗಿರುವ ಖದೀಮರು, ಮೊದಲಿಗೆ ಆರ್ಚಕರ ಮನೆ ಬಾಗಿಲನ್ನು ಲಾಕ್ ಮಾಡಿದ್ದಾರೆ. ಹುಂಡಿಯ ಬೀಗ ಒಡೆದಿದ್ದಾರೆ. ಆದರೆ, ಹುಂಡಿಯನ್ನು ತೆರೆಯಲು ಸಾಧ್ಯವಾಗದೆ ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಆರ್ಚಕರು ಎಂದಿನಂತೆ ನಿತ್ಯಪೂಜೆಗೆ ದೇವಸ್ಥಾನಕ್ಕೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
![Thieves attempt Doddaballapura Prasanna Venkataramanaswamy temple](https://etvbharatimages.akamaized.net/etvbharat/prod-images/20-03-2024/kn-bng-01-theft-avb-ka10057_19032024164422_1903f_1710846862_170.jpeg)
ಒಂದು ತಿಂಗಳ ಹಿಂದೆ ಪ್ರಸನ್ನ ವೆಂಕಟರಣಸ್ವಾಮಿ ದೇವರ ರಥೋತ್ಸವ ನಡೆದಿತ್ತು. ದೇವಸ್ಥಾನದ ಹುಂಡಿಗೆ ಭಾರಿ ದೇಣಿಗೆ ಬಂದಿದೆ ಎಂದು ಕಳ್ಳರು ಲೆಕ್ಕಚಾರ ಹಾಕಿದ್ದರು. ಹುಂಡಿ ಒಡೆದರೆ ಹೆಚ್ಚು ಹಣ ಸಿಗುತ್ತೆ ಎಂದು ಬಂದಿದ್ದ ಅವರಿಗೆ ನಿರಾಸೆಯಾಗಿದೆ. ದೇವಸ್ಥಾನದಲ್ಲಿ ಈ ಹಿಂದೆ ಕಳವು ಪ್ರಕರಣ ನಡೆದಿತ್ತು. ಆನಂತರ ದೇವಸ್ಥಾನದ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನಲವನ ಸೆರೆಯಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರನ್ನು ಶೀಘ್ರವೇ ಪೊಲೀಸರು ಸೆರೆ ಹಿಡಿಯುತ್ತಾರೆಂದು ಸ್ಥಳೀಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಅದ್ಧೂರಿಯಾಗಿ ನಡೆದ ಶಿಶುನಾಳ ಶರೀಫ, ಗುರು ಗೋವಿಂದ ಭಟ್ ಜಾತ್ರಾ ರಥೋತ್ಸವ