ಕಾರವಾರ: ಇಲ್ಲಿನ ಕೋಡಿಭಾಗದಲ್ಲಿ ಕಾಳಿ ಸೇತುವೆ ಅವಶೇಷಗಳ ತೆರವು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ 43 ವರ್ಷಗಳಿಂದ ಕಾರವಾರ-ಗೋವಾ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದ ಕಾಳಿ ನದಿಯ ಸೇತುವೆ ಆ.7ರ ತಡರಾತ್ರಿ ಅರ್ಧದಷ್ಟು ಕುಸಿದು ಬಿದ್ದಿತ್ತು. ಇನ್ನರ್ಧ ಭಾಗ ಗಟ್ಟಿಯಾಗಿಯೇ ನಿಂತಿದೆ. ಈ ಸೇತುವೆಯ ಅವಶೇಷಗಳ ತೆರವು ಮಾಡಿ ಮತ್ತು ಉಳಿದ ಭಾಗವನ್ನು ಸಂಪೂರ್ಣವಾಗಿ ಕೆಡವುದಾಗಿ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ಮತ್ತು ಎನ್ಹೆಚ್ಎಐ ಈ ಹಿಂದೆ ನಿರ್ಧರಿಸಿದ್ದವು. ಅದರಂತೆ ಅವಶೇಷ ತೆರವು ಮಾಡಿ ಇನ್ನುಳಿದ ಭಾಗ ಕೆಡವಲು 6 ರಿಂದ 8 ತಿಂಗಳ ಕಾಲಾವಕಾಶ ಬೇಕು ಎಂದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ ತಿಂಗಳುಗಳೇ ಕಳೆದರೂ ಸೇತುವೆ ಅವಶೇಷ ತೆರವು ಕಾರ್ಯ ಮಾತ್ರ ವೇಗ ಪಡೆದಿಲ್ಲ.
ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಪ್ರತಿಕ್ರಿಯಿಸಿ, "ಎನ್ಹೆಚ್ಎಐ 6 ತಿಂಗಳಲ್ಲಿ ಸೇತುವೆ ಅವಶೇಷ ತೆರವುಗೊಳಿಸುವುದಾಗಿ ಪರವಾನಗಿ ಪಡೆದಿದೆ. ತೆರವು ಕಾರ್ಯಾಚರಣೆ ಬಗ್ಗೆ ಆಗಾಗ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಆದರೆ ಮುಂದೆ ಯಾವ ರೀತಿ ಸೇತುವೆ ನಿರ್ಮಾಣ ಮಾಡುತ್ತಾರೆ ಎಂಬುದರ ಬಗ್ಗೆ ನಮಗೆ ನೀಲನಕ್ಷೆ ನೀಡಿಲ್ಲ. ನಾವು ಆದಷ್ಟು ಬೇಗ ತೆರವು ಕಾರ್ಯ ಮುಗಿಸಿ ಸೇತುವೆ ಕಾಮಗಾರಿ ಪ್ರಾರಂಭಿಸಲು ಎನ್ಹೆಚ್ಎಐಗೆ ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸ್ಥಳೀಯರಾದ ಭಾಸ್ಕರ್ ಪಟಗಾರ ಮಾತನಾಡಿ, "ಹಳೇ ಪಿಲ್ಲರ್ಗಳ ಮೇಲೆಯೇ ಹೊಸ ಸ್ಲ್ಯಾಬ್ಗಳನ್ನು ಜೋಡಿಸಿ ಸೇತುವೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು. ಇದಕ್ಕೆ ಸ್ಥಳೀಯರ ತೀವ್ರ ವಿರೋಧವಿದೆ. ಧಾರಣ ಸಾಮರ್ಥ್ಯ ಕೊರತೆಯಿಂದಲೇ ಸೇತುವೆ ಕುಸಿದು ಬಿದ್ದಿದೆ ಎಂದು ಎಲ್ಲರಿಗೂ ತಿಳಿದಿದೆ. ಮತ್ತೆ ಹಳೇ ಪಿಲ್ಲರ್ ಮೇಲೆಯೇ ಸ್ಲ್ಯಾಬ್ ಜೋಡಣೆ ಮಾಡಿ ಹೊಸ ಸೇತುವೆ ನಿರ್ಮಾಣ ಮಾಡಿದರೆ ಮತ್ತೆ ಘಟನೆ ಮರುಕಳಿಸಬಹುದು. ಆದ್ದರಿಂದ ಹೊಸದಾಗಿ ಪಿಲ್ಲರ್ ಕಟ್ಟಿಯೇ ಸೇತುವೆ ನಿರ್ಮಾಣ ಮಾಡಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬೆಳಗಾವಿ ಸುವರ್ಣ ವಿಧಾನಸೌಧ ಮುಂದೆ ತಲೆ ಎತ್ತುತ್ತಿದೆ ಸೈನ್ಸ್ ಪಾರ್ಕ್: ಮಕ್ಕಳ ಭವಿಷ್ಯಕ್ಕೆ ನರೇಗಾ ಕೂಲಿ ಕಾರ್ಮಿಕರ ಶ್ರಮದಾನ