ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೆ ನಿರ್ವಹಣೆ ಕುರಿತು ರಾಜ್ಯ ಬಿಜೆಪಿ ನಾಯಕರು ಪರಾಮರ್ಶೆ ನಡೆಸಲಿದ್ದು, ಟಾರ್ಗೆಟ್ ರೀಚ್ ಕುರಿತ ಅವಲೋಕನ ನಡೆಸಿ ಪಕ್ಷದ ಹೈಕಮಾಂಡ್ಗೆ ವರದಿ ಸಲ್ಲಿಕೆ ಮಾಡಲಿದ್ದಾರೆ.
ಕಳೆದ ಬಾರಿ ಏಕಾಂಗಿಯಾಗಿ ಸ್ಪರ್ಧೆ ಮಾಡಿ 25 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅಷ್ಟು ಸ್ಥಾನ ಉಳಿಸಿಕೊಳ್ಳುವುದು ಅನುಮಾನವಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಕಳೆದ ಬಾರಿಯ ಎಲ್ಲ ಸ್ಥಾನ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಆದರೂ ಎಷ್ಟು ಸ್ಥಾನ ಗಳಿಸಲಿದೆ ಹಾಗೂ ಎಲ್ಲಿ ಹಿನ್ನಡೆ ಸಾಧ್ಯತೆ ಇದೆ ಎನ್ನುವ ಕುರಿತು ಪರಾಮರ್ಶೆಗೆ ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ನಾಳೆ ಸಂಜೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳು, ಶಾಸಕರು, ಅಭ್ಯರ್ಥಿಗಳು ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರ ಸಭೆ ಕರೆಯಲಾಗಿದೆ. ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಎಲ್ಲಾ 28 ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ. 25 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡಿದ್ದು, 3 ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿವೆ. ಎಲ್ಲ ಕ್ಷೇತ್ರಗಳಲ್ಲಿ ನಡೆದ ಇಡೀ ಚುನಾವಣಾ ಪ್ರಚಾರ ಪ್ರಕ್ರಿಯೆ ಕುರಿತು ಪರಾಮರ್ಶೆ ನಡೆಸಲಾಗುತ್ತದೆ. ಚುನಾವಣಾ ನಿರ್ವಹಣಾ ಸಮಿತಿ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸಲಾಗಿದೆ. ನಿರೀಕ್ಷೆಯಂತೆ ಪ್ರಚಾರ ಕಾರ್ಯ ನಡೆದಿದೆಯಾ ಅಥವಾ ಹಿನ್ನಡೆಗೆ ಕಾರಣವಾಗುವಂತಹ ಘಟನೆಗಳು ನಡೆದಿವೆಯಾ ಎನ್ನುವ ಕುರಿತು ಚರ್ಚಿಸಲಾಗುತ್ತದೆ. ಬೂತ್ ಮಟ್ಟದಿಂದಲೇ ಚುನಾವಣಾ ನಿರ್ವಹಣೆ ನಡೆದಿದ್ದು, ಅದರ ಸಂಪೂರ್ಣ ವರದಿ ಪಡೆಯಲಾಗುತ್ತದೆ.
ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ನಡೆದ 14 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 11 ಜೆಡಿಎಸ್ 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಬೆಂಗಳೂರು ಉತ್ತರ, ಚಾಮರಾಜನಗರದಲ್ಲಿ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ ಕುರಿತು ನಡೆಯುತ್ತಿರುವ ಚರ್ಚೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಹಲವು ಘಟನೆಗಳಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತದೆಯಾ ಎನ್ನುವ ಕುರಿತು ಚರ್ಚಿಸಲಾಗುತ್ತದೆ. ಇನ್ನು ಮಿತ್ರಪಕ್ಷಕ್ಕೆ ನೀಡಿರುವ ಮೂರು ಸ್ಥಾನಗಳಲ್ಲಿ ಮಂಡ್ಯದಲ್ಲಿ ಭಾರಿ ಪ್ರಮಾಣದ ಪೈಪೋಟಿ, ಹಾಸನ ಅಭ್ಯರ್ಥಿ ವಿವಾದದಲ್ಲಿ ಸಿಲುಕಿದ್ದರಿಂದ ಹಿನ್ನಡೆ ಆಗಿದೆಯಾ ಎನ್ನುವ ಕುರಿತು ಬಿಜೆಪಿ ನಾಯಕರಿಂದಲೇ ಮಾಹಿತಿ ಪಡೆಯಲಾಗುತ್ತದೆ. ಮೊದಲ ಹಂತದ 14 ಕ್ಷೇತ್ರದಲ್ಲಿ 8 - 10 ಕ್ಷೇತ್ರದಲ್ಲಿ ಗೆಲ್ಲುವ ಲೆಕ್ಕಾಚಾರ ಇದ್ದು, ಆ ಬಗ್ಗೆ ಅಂಕಿ ಅಂಶಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗುತ್ತದೆ.
ಇನ್ನು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆ ಬಿಜೆಪಿ ನಾಯಕರದ್ದಾಗಿದೆ. ಎಲ್ಲ 14 ಕ್ಷೇತ್ರದಲ್ಲಿಯೂ ಬಿಜೆಪಿಯೇ ಸ್ಪರ್ಧೆ ಮಾಡಿದ್ದು, ಜೆಡಿಎಸ್ ನಾಯಕರು ಪ್ರಚಾರಕ್ಕೆ ಸಾಥ್ ನೀಡಿದ್ದರು. ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು ಕಠಿಣವಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆಯಾ? ಆಗಿದ್ದರೆ ಯಾವ ಕಾರಣಕ್ಕೆ ಆಗಿದೆ ಎನ್ನುವ ಕುರಿತು ಚರ್ಚಿಸಲಾಗುತ್ತದೆ.
ಬಿಜೆಪಿ 18 ರಿಂದ 20 ಸ್ಥಾನದ ನಿರೀಕ್ಷೆಯಲ್ಲಿದ್ದರೆ, ಬಿಜೆಪಿ ಜೆಡಿಎಸ್ ಮಿತ್ರಕೂಟಕ್ಕೆ 20 ರಿಂದ 22 ಸ್ಥಾನದ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದೆಯಾ? ಎನ್ನುವ ಕುರಿತು ಸಮಗ್ರ ಮಾಹಿತಿ ಪಡೆಯಲಾಗುತ್ತದೆ. ಪ್ರತಿಯೊಬ್ಬ ಶಾಸಕರಿಂದಲೇ ಅವರ ಕ್ಷೇತ್ರದ ಮುನ್ನಡೆ, ಹಿನ್ನಡೆ ಸಾಧ್ಯತೆ ಮಾಹಿತಿ ಪಡೆದು ಹೈಕಮಾಂಡ್ಗೆ ವರದಿ ರೂಪದಲ್ಲಿ ಈ ಮಾಹಿತಿಯನ್ನು ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಪಕ್ಷದ ಆಂತರಿಕ ಸಮೀಕ್ಷಾ ವರದಿ ಇದ್ದರೂ ರಾಜ್ಯ ಘಟಕದಿಂದ ವಸ್ತುಸ್ಥಿತಿಯ ವಿವರವನ್ನು ಹೈಕಮಾಂಡ್ ಬಯಸಿದ್ದು, ಅದರಂತೆ ಹೈಕಮಾಂಡ್ ಸಭೆ ನಂತರ ಮಾಹಿತಿ ಕಳುಹಿಸಿಕೊಡಲಾಗುತ್ತದೆ.
ನಾಳೆ ಪಕ್ಷದ ಶಾಸಕರು, ಅಭ್ಯರ್ಥಿಗಳ ಸಭೆ ಕರೆದಿರುವ ಮಾಹಿತಿಯನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಖಚಿತಪಡಿಸಿದ್ದಾರೆ. ಚುನಾವಣಾ ನಿರ್ವಹಣೆಯ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುರಿತು ನಾಳಿನ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಆದರೆ, ಯಾವುದೇ ವಿಚಾರಗಳ ಕುರಿತು ಮಾತನಾಡಲು ನಿರಾಕರಿಸಿದ್ದು, ಸಭೆ ನಂತರ ಸಮಗ್ರ ವಿವರ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಮೇಲೆ ನಂಬಿಕೆಯಿದೆ, ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah