ಬಾಗಲಕೋಟೆ: ಗುಜರಿ ತುಂಬುವವರ ಮಗ ಸತತ 4ನೇ ಪ್ರಯತ್ನದಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆ ಆಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಾಧನೆ ಮಾಡುವ ಛಲವಿದ್ದರೆ ಏನನ್ನೂ ಬೇಕಾದರು ಸಾಧಿಸಬಹುದು ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.
ಈ ಸಾಧಕನ ಹೆಸರು ಮಹಮ್ಮದ್ ಅಜುರುದ್ದೀನ್. ಇಲಕಲ್ಲ ಪಟ್ಟಣದ ನಿವಾಸಿ ಅಜುರುದ್ದೀನ್ ಯುಪಿಎಸ್ಸಿ ನಡೆಸುವ ಸಿಎಪಿಎಫ್ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆ ಆಗಿದ್ದಾರೆ. ಈ ಆಯ್ಕೆಗೂ ಮುನ್ನ ಮೂರು ಬಾರಿ ಪರೀಕ್ಷೆ ಬರೆದು ಫೇಲ್ ಆಗಿ ನಾಲ್ಕನೇ ಸಲಕ್ಕೆ ಉತ್ತೀರ್ಣರಾಗಿದ್ದಾರೆ. ಮನೆಯಲ್ಲಿ ಬಡತನ ಇದ್ದರೂ ಅಜರುದ್ದೀನ್ ಓದಿಗೆ ಅವರ ತಾಯಿ ಯಾವುದೇ ಕೊರತೆ ಮಾಡಿಲ್ಲ. ಮೊದಲು ಪ್ಲಾಸ್ಟಿಕ್ ಆಯ್ದು ಕುಟುಂಬ ನಡೆಸುತ್ತಿದ್ದ ತಾಯಿ ಬೀಬಿಜಾನ, ಈಗ ಗುಜರಿ ತುಂಬುವ ಕಾಯಕ ಮಾಡಿಕೊಂಡು ಮಗನ ಸಾಧನೆಗೆ ಸಾಥ್ ನೀಡಿದ್ದಾಳೆ.
ಮಹಮ್ಮದ ಅಜರುದ್ದೀನ್ ಪ್ರಾಥಮಿಕ ಶಿಕ್ಷಣವನ್ನು ಇಳಕಲ್ ನಗರದ ಮಹಾಂತ ಗುರುಗಳ ಶಾಲೆಯಲ್ಲಿ ಅಧ್ಯಯನ ಮಾಡಿ, 6ನೇ ತರಗತಿಗೆ ನವೋದಯ ಶಾಲೆ ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಪದವಿ ಮಾಡಿದ್ದಾರೆ. ಮುಂಬೈ ಹಾಗೂ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆದುಕೊಂಡಿದ್ದಾರೆ.
"ನನ್ನ ಶೈಕ್ಷಣಿಕ ಜೀವನದಲ್ಲಿ ತಾಯಿ ಹಾಗೂ ಸಹೋದರರು ಬಡತನ ತೋರಿಸಲೇ ಇಲ್ಲ. ಅವರು ಕಷ್ಟಪಟ್ಟು ನನ್ನ ಓದಿಗೆ ತೊಂದರೆ ಆಗದಂತೆ ಸಹಾಯ ಮಾಡಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಒಂದು ಸಲ ಫೇಲ್ ಆದೆ ಎಂದು ಪ್ರಯತ್ನ ನಿಲ್ಲಿಸಬೇಡಿ. ಆತ್ಮವಿಶ್ವಾಸ, ನಿಷ್ಠೆಯಿಂದ ಮತ್ತೆ ಪ್ರಯತ್ನಿಸಿ ಯಶಸ್ಸು ಸಿಗುತ್ತದೆ ಎಂದು ಅಜುರುದ್ದೀನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ನು ಮಗನ ಸಾಧನೆಗೆ ತಾಯಿ ಬೀಬಿಜಾನ್ ಭಾವುಕಳಾಗಿ "ಇದನ್ನು ನೋಡಲು ಆತನ ತಂದೆ ಇರಬೇಕಿತ್ತು" ಎಂದು ಕಣ್ಣೀರು ಹಾಕಿದ್ದಾರೆ. ಹಾಗೇ, ಅಜರುದ್ದೀನ್ ಯುಪಿಎಸ್ಸಿ ಸಾಧನೆಗೆ ಸಮುದಾಯ ಹಾಗೂ ಆತ್ಮೀಯರು ಸನ್ಮಾನಿಸಿದ್ದಾರೆ.