ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದ ರಸ್ತೆ ಅಪಘಾತಗಳಲ್ಲಿ ಬಲಿಯಾಗುವವರ ಪ್ರಮಾಣ ಕಡಿಮೆಯಾಗಿದೆ. ರಸ್ತೆ ಸಂಚಾರದಲ್ಲಿ ಕೈಗೊಂಡ ಬಿಗಿಯಾದ ಕ್ರಮ ಹಾಗೂ ವಾಹನ ಸವಾರರಲ್ಲಿ ಸಂಚಾರ ಪೊಲೀಸರು ಮೂಡಿಸಿದ ಜಾಗೃತಿ ಫಲವಾಗಿ ಅಪಘಾತ ಪ್ರಕರಣಗಳಲ್ಲಿ ಸಾಯುವವರ ಸಂಖ್ಯೆ ಇಳಿಕೆಯಾಗಿದೆ.
ಈ ಹಿಂದೆ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇ , ಬೆಂಗಳೂರು - ಪುಣೆ, ಬೆಂಗಳೂರು-ಮಂಗಳೂರು ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿದ್ದ ಅಪಘಾತ ಪ್ರಕರಣಗಳಲ್ಲಿ ಸಾಯುವವರ ಸಂಖ್ಯೆ ಅಧಿಕವಾಗಿತ್ತು. ಕಳೆದ ಆಗಸ್ಟ್ ತಿಂಗಳೊಂದರಲ್ಲಿ 801 ಮಂದಿ ಸಾವನ್ನಪ್ಪಿದರೆ, 2023ರ ಆಗಸ್ಟ್ನಲ್ಲಿ 914 ಹಾಗೂ 2022ರ ಆಗಸ್ಟ್ ನಲ್ಲಿ 900 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದರು. ಕಳೆದ ಜುಲೈನಲ್ಲಿ 800 ಮಂದಿ ಬಲಿಯಾಗಿದ್ದರೆ, 2023 ಹಾಗೂ 2022ರಲ್ಲಿ ಅನುಕ್ರಮವಾಗಿ 862 ಹಾಗೂ 867 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಪೊಲೀಸರು ನೀಡಿದ ಅಂಕಿ - ಅಂಶಗಳಿಂದ ಬಹಿರಂಗಗೊಂಡಿದೆ.
ಕಳೆದ 8 ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ ಮಡಿದವರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಇದೇ ವರ್ಷ ಜನವರಿಯಿಂದ ಆಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ 7,596 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಕೊಂಚ ಇಳಿಕೆಯಾಗಿದೆ. 2023 ಹಾಗೂ 2022ರಲ್ಲಿ ಕ್ರಮವಾಗಿ 8,146 ಹಾಗೂ 7,996 ಮಂದಿ ಸಾವನ್ನಪ್ಪಿದ್ದರು. ರಾಜಧಾನಿಯಲ್ಲಿ ಕಳೆದ ಎಂಟು ತಿಂಗಳಲ್ಲಿ 569 ಮಂದಿ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ454 ಮಂದಿ ಸಾವನ್ನಪ್ಪಿದ್ದಾರೆ.
ಅಸುರಕ್ಷಿತ ರಸ್ತೆಗಳು, ಮಿತಿ ಮೀರಿದ ವೇಗ, ಮದ್ಯ ಸೇವನೆ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಇದನ್ನು ತಗ್ಗಿಸುವ ಸಲುವಾಗಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕೈಗೊಂಡ ಸುಧಾರಣ ಕ್ರಮಗಳಿಂದಾಗಿ ಅಪಘಾತ ಸಂಖ್ಯೆಯ ಇಳಿಕೆಯಾಗಿ ಸಾವನ್ನಪ್ಪುವವರ ಸಂಖ್ಯೆ ತಗ್ಗಿದೆ. ಹೆಚ್ಚೆಚ್ಚು ಅಪಘಾತ ಸಂಭವಿಸುವ ಹೆದ್ದಾರಿಗಳಲ್ಲಿ ವೇಗದ ಚಾಲನೆ ನಿಗದಿ, ಶಿಸ್ತುಪಥ, ಕಣ್ಣುಕುಕ್ಕುವ ಹೈಬೀಮ್ ಲೈಟ್ ಬಳಕೆಗೆ ಕಡಿವಾಣ, ಬ್ಲಾಕ್ ಸ್ಪಾಟ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಮೊದಲಾದ ಕ್ರಮಗಳನ್ನ ಕೈಗೊಂಡ ಪರಿಣಾಮ ಆಕ್ಸಿಡೆಂಟ್ಗಳಲ್ಲಿ ಬಲಿಯಾಗುವವರ ಪ್ರಮಾಣ ಕಡಿಮೆಯಾಗಿದೆ.
3 ವರ್ಷಗಳಲ್ಲಿ 23,738 ಸಾವಿರ ಮಂದಿ ಸಾವು: ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಹೊರವಲಯ ಹಾಗೂ ಸುತ್ತಮುತ್ತಲಿನ ರಸ್ತೆಗಳೇ ಅಪಾಯಕಾರಿಯಾಗಿ ಕಂಡು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 23,738 ಸಾವಿರ ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಜೊತೆ ಹೊರವಲಯ ಭಾಗಗಳಲ್ಲಿ ಕೈಗಾರಿಕೆ, ಕಂಪನಿಗಳ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗುತ್ತಿದ್ದಂತೆ ವಾಹನ ಸವಾರರ ಸಂಖ್ಯೆಯು ಕ್ರಮೇಣ ಹೆಚ್ಚಾಗುತ್ತಿದ್ದು, ರಸ್ತೆ ಅಗಲೀಕರಣ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸದ ಪರಿಣಾಮ ಭೀಕರ ಅಪಘಾತ ಸಂಭವಿಸಿ ಮರಣ ಹೊಂದುವವರ ಸಂಖ್ಯೆ ಏರಿಕೆಯಾಗಿದೆ.
ಮರಣ ಪ್ರಮಾಣ ಇಳಿಕೆಗೆ ಕಾರಣವೇನು?: ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇ ಸೇರಿದಂತೆ ಹಲವು ಹೆದ್ದಾರಿಗಳಲ್ಲಿ ಎಐ ಕ್ಯಾಮರಾ, ಸ್ಪೀಡ್ ರೆಡಾರ್ ಕ್ಯಾಮರಾ ಅಳವಡಿಕೆ. ವೇಗದ ಮಿತಿಗೆ ಬ್ರೇಕ್ ಹಾಕಿ ದಂಡ ಹಾಕುತ್ತಿರುವುದು. ಪಾನಮತ್ತರಾಗಿ ವಾಹನ ಚಲಾಯಿಸುವ ಸವಾರರ ಮೇಲೆ ನಿಗಾ. ರಾತ್ರಿ ವೇಳೆ ಹೈಬೀಮ್ ಲೈಟ್ ಬಳಕೆಗೆ ನಿಷೇಧ ರಾಜ್ಯದಲ್ಲಿ ಅಪಘಾತ ಹಾಗೂ ಮರಣ ಸಂಖ್ಯೆ ಇಳಿಸುವಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಶ್ರಮಿಸಿದ ಪ್ರತಿಯೊಬ್ಬ ಸಿಬ್ಬಂದಿಗಳ ಕಾರ್ಯ ಅಭಿನಂದನಾರ್ಹ. ಸಂಚಾರ ಸುರಕ್ಷತೆ ಹಾಗೂ ಅಪಘಾತಗಳ ಸಂಖ್ಯೆಯನ್ನ ತಗ್ಗಿಸಲು ಹರಸಾಹಸವಾಗಿದ್ದು, ಇದರ ವಿರುದ್ಧ ಹೋರಾಡುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ಬಲಿಯಾದವರ ಸಂಖ್ಯೆ (ಜನವರಿಯಿಂದ ಆಗಸ್ಟ್ ವರೆಗೆ):
ವರ್ಷ | ಸಾವು |
2024 | 7596 |
2023 | 8146 |
2022 | 8146 |
ಜಿಲ್ಲಾವಾರು ಅಪಘಾತ:
ಜಿಲ್ಲೆ | ಅಪಘಾತ |
ಬೆಂಗಳೂರು ನಗರ | 564 |
ತುಮಕೂರು | 470 |
ಬೆಂಗಳೂರು ಗ್ರಾಮಾಂತರ | 454 |
ಬೆಳಗಾವಿ | 450 |
ಮಂಡ್ಯ | 340 |
ಬೆಳಗಾವಿ ನಗರ | 89 |
ಕಲಬುರಗಿ ನಗರ | 76 |
ಹುಬ್ಬಳ್ಳಿ - ಧಾರವಾಡ | 56 |
ಇದನ್ನೂ ಓದಿ: ಹುಬ್ಬಳ್ಳಿ: ಟೋಲ್ ಡಿವೈಡರ್ಗೆ ಕಾರು ಡಿಕ್ಕಿ, 3 ತಿಂಗಳ ಮಗು ಸಾವು - Hubballi Road Accident