ಮೈಸೂರು : ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಶ್ವೇತಪತ್ರ ಹೊರಡಿಸಿ, ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನ ಬಹಿರಂಗ ಪಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದರು.
ಇಂದು ನಗರದ ಜಲದರ್ಶನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದ ಅವರು, ಇವತ್ತು ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಸರ್ಕಾರದಲ್ಲಿ ಸರಿಯಾದ ಹಿಡಿತ ಇಲ್ಲ. ಹುಚ್ಚು ಹುಚ್ಚಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಆಡಳಿತದಲ್ಲಿ ಬಿಗಿ ಹಿಡಿತ ಇಲ್ಲದ ಕಾರಣ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ. ರೂಪ ಬೀದಿ ಜಗಳ ರಂಪಾಟವಾದಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಿ ಬಹಿರಂಗ ಪಡಿಸಬೇಕು ಎಂದರು.
ಪ್ರಿನ್ಸೆಸ್ ರಸ್ತೆ ಹೆಸರು ಜಟಾಪಟಿ ಬಗ್ಗೆ ಬೇಸರ : ಕೆಆರ್ಎಸ್ ರಸ್ತೆಗೆ ಪ್ರಿನ್ಸೆಸ್ ಎಂಬ ಹೆಸರಿನ ಬಗ್ಗೆ ಹಲವು ರೀತಿಯ ದಾಖಲೆಗಳಿವೆ. ಅದನ್ನು ಬಿಟ್ಟು ಸಿದ್ದರಾಮಯ್ಯನವರ ಹೆಸರನ್ನ ಇಡಲು ಹೋಗಿ ಸಿದ್ದರಾಮಯ್ಯ ಬೆಂಬಲಿಗರು ಅವರ ಹೆಸರನ್ನ ಕೆಡಿಸಲು ಹೊರಟಿದ್ದಾರೆ. ಈ ರೀತಿಯ ಅಪಮಾನ ಸಿದ್ದರಾಮಯ್ಯನವರಿಗೆ ಬೇಡ. ಜನ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ. ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡದಿದ್ದರೆ ಸಿದ್ದರಾಮಯ್ಯ ಬೆಂಬಲಿಗರು ಮೈಸೂರಿನಲ್ಲಿ ಮತ್ತೊಮ್ಮೆ ನಿಮ್ಮ ಹೆಸರನ್ನು ಕೆಡಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಹೆಚ್ ವಿಶ್ವನಾಥ್ ಎಚ್ಚರಿಕೆ ನೀಡಿದರು.
ಅರಸರ ಬಗ್ಗೆ ಮಾತನಾಡಬೇಡಿ : ಸಂಸದ ಯದುವೀರ್ ನಕಲಿ ಮಹಾರಾಜ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, ಇದರಿಂದ ಲಕ್ಷ್ಮಣ್ ಅವರಿಗೆ ಒಳ್ಳೆಯದು ಆಗುವುದಿಲ್ಲ. ಮೈಸೂರಿನ ಯದುವಂಶ ಅರಸರ ಬಗ್ಗೆ ನೀವು ಮಾತನಾಡಿದರೆ ನೀವೇ ಚೀಪ್ ಆಗುತ್ತೀರಾ ಹೊರತು, ಮೈಸೂರು ಅರಸರಿಗೆ ಏನೂ ಆಗುವುದಿಲ್ಲ. ಇದೇ ತಿಂಗಳು ಜನವರಿ 7 ರಂದು ಅಮಿತ್ ಶಾ ಹೇಳಿಕೆ ಕುರಿತು ಮೈಸೂರು ಬಂದ್ಗೆ ಕರೆ ನೀಡಿದ್ದು, ಇದಕ್ಕೆ ನನ್ನ ಬೆಂಬಲ ಇದೆ ಎಂದರು.
ಕ್ಯಾನ್ಸರ್ ಗೆ ಯಶಸ್ವಿ ಚಿಕಿತ್ಸೆ ಪಡೆದಿರುವ ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೆಚ್ ವಿಶ್ವನಾಥ್ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಜೀವಂತವಾಗಿದ್ದಲ್ಲಿ ಶಾಸಕ ಶಾಮನೂರನ್ನು ಉಚ್ಛಾಟಿಸಲಿ: ಎಂಎಲ್ಸಿ ವಿಶ್ವನಾಥ್ - ಎಂಎಲ್ಸಿ ವಿಶ್ವನಾಥ್