ಬೆಂಗಳೂರು: ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ರಾಜೇಶ್ (36) ಕೊಲೆಯಾದವರು. ಲಿಂಗಪ್ಪ ಹತ್ಯೆಗೈದ ಆರೋಪಿ.
ಕ್ಯಾಬ್ ಚಾಲಕನಾಗಿದ್ದ ರಾಜೇಶ್, ನಿತ್ಯವೂ ಪಾನಮತ್ತನಾಗಿ ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ. ಮಗನ ಕಿರುಕುಳ ತಾಳಲಾರದೇ ಲಿಂಗಪ್ಪ ಹಾಗೂ ಆತನ ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೂ ಸಹ ಕುಡಿದು ಬಂದು ಗಲಾಟೆ ಮಾಡುವುದನ್ನ ರಾಜೇಶ್ ನಿಲ್ಲಿಸಿರಲಿಲ್ಲ. ತಡರಾತ್ರಿಯೂ ಪಾನಮತ್ತನಾಗಿ ಬಂದಿದ್ದ ರಾಜೇಶ್, ಮನೆಯ ಗೇಟ್‌ನ್ನ ಒದ್ದು, ತಂದೆಯ ಮೇಲೆ ಹಲ್ಲೆ ಮಾಡಲಾರಂಭಿಸಿದ್ದ. ಬೇಸತ್ತ ಲಿಂಗಪ್ಪ, ಪಾನಮತ್ತನಾಗಿದ್ದ ರಾಜೇಶ್'ನ ಕೈಕಾಲು ಕಟ್ಟಿ ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದಾಗಿ ರಾಜೇಶ್ ಮೃತಪಟ್ಟಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಆತ್ಮಹತ್ಯೆ: ಮನೆಯಲ್ಲಿ ತಂದೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರಾವ್ಯಾ.ಡಿ (19) ಮೃತ ಯುವತಿ.
ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯಾ ಮನೆಯಲ್ಲಿ ಕೌಟುಂಬಿಕ ಜಗಳದ ವಿಚಾರವಾಗಿ ನೊಂದಿದ್ದಳು ಎನ್ನಲಾಗಿದೆ. ಅಲ್ಲದೆ ಶುಕ್ರವಾರ ರಾತ್ರಿ ಮಲಗುವಾಗ ಬೆಡ್ ಶೀಟ್ ವಿಚಾರಕ್ಕೆ ಶ್ರಾವ್ಯಾ ಹಾಗೂ ಆಕೆಯ ಸಹೋದರಿ ನಡುವೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ಶ್ರಾವ್ಯಾಗೆ ಅವರ ತಂದೆ ಬೈದು ಬುದ್ಧಿವಾದ ಹೇಳಿದ್ದರು. ಇದರಿಂದ ನೊಂದು ಶ್ರಾವ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ವರದಿಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ: ಗೂಡ್ಸ್ ವಾಹನದ ಕ್ಯಾಬಿನ್ನಲ್ಲಿತ್ತು ₹2.73 ಕೋಟಿ ಹಣ: ಜಪ್ತಿ ಮಾಡಿದ ಸಿಸಿಬಿ