ಬೆಂಗಳೂರು : ಬ್ಯಾಂಕ್‌ನ ಹರಾಜಿನಲ್ಲಿ ಆಸ್ತಿಯನ್ನು ಖರೀದಿಸಿದವರು ನಿಗದಿತ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಮುಂಗಡವಾಗಿ ಠೇವಣಿವನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹೈಕೋರ್ಟ್ ಹೇಳಿದೆ.
ಉಡುಪಿ ಜಿಲ್ಲೆ ಕಾರ್ಕಳದ ನಿವಾಸಿಗಳಾದ ಕೆ. ಸುಬ್ರಹ್ಮಣ್ಯರಾವ್ ಮತ್ತು ಅವರ ಪತ್ನಿ ಹೆಚ್. ಎಂ ನಾಗರತ್ನ ಅವರಿಗೆ 3.25 ಕೋಟಿ ರೂ. ಗಳನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ ಅರವಿಂದ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜತೆಗೆ, ಮುಂಗಡ ಠೇವಣಿ ಇಟ್ಟಿರುವ ಹಣವನ್ನು ಹಿಂದಿರುಗಿಸುವ ಮನವಿಯನ್ನು ಅಂಗೀಕರಿಸುವುದಕ್ಕೆ ಅವಕಾಶವಿಲ್ಲ. ಬ್ಯಾಂಕ್ ಅಧಿಕಾರಿಗಳು ಅನ್ಯಾಯವೆಸಗಿಲ್ಲ, ಅವಧಿಯನ್ನು ವಿಸ್ತರಿಸಿದ್ದರೂ ಬಿಡ್‌ನ ಬಾಕಿ ಮೊತ್ತವನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಪೀಠ ಹೇಳಿದೆ.
ಅಲ್ಲದೆ, ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ದ್ವಿಸದಸ್ಯ ಪೀಠ, ಭದ್ರತಾ ಹಿತಾಸಕ್ತಿ ನಿಯಮಗಳು 2002ರ ನಿಯಮ 9(5) ಪ್ರಕಾರ ಹರಾಜಿನಲ್ಲಿ ಖರೀದಿದಾರನು ಕಂತು ಪಾವತಿಸುವಲ್ಲಿ ಸುಸ್ತಿದಾರರಾದಲ್ಲಿ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಬ್ಯಾಂಕ್ ನೀಡಿದ ಸಾಲವನ್ನು ವಸೂಲಿ ಮಾಡುವ ಸಲುವಾಗಿ ಬೆಂಗಳೂರಿನ ವಿಲ್ಸನ್ ಗಾರ್ಡ್ನ್ನಲ್ಲಿರುವ ಆಸ್ತಿಯೊಂದನ್ನು 2021ರ ನವೆಂಬರ್ 29 ರಂದು ಇ-ಹರಾಜು ನಡೆಸಿತ್ತು.
ಸುಬ್ರಹ್ಮಣ್ಯ ರಾವ್ ಮತ್ತವರ ಪತ್ನಿ ಬಿಡ್ಡ್ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದರು. ಹೀಗಾಗಿ, ಒಟ್ಟು ಬಿಡ್ಡ್ನ ಮೊತ್ತ 13 ಕೋಟಿಯಾಗಿದ್ದು, ಅದರಲ್ಲಿ ಶೇ. 25ರಷ್ಟು ಅಂದರೆ 3.25 ಕೋಟಿ ರೂ. ಗಳನ್ನು ಮುಂಗಡವಾಗಿ ಪಾವತಿಸಿದ್ದು, ಇನ್ನುಳಿದ ಮೊತ್ತ 9.75 ಕೋಟಿ ರೂ.ಗಳನ್ನು 15 ದಿನಗಳಲ್ಲಿ ಪಾವತಿ ಮಾಡಬೇಕಾಗಿತ್ತು.
2022ರ ಜನವರಿ 13 ರಂದು ದಂಪತಿ ಬಾಕಿ ಮೊತ್ತ ಪಾವತಿ ಮಾಡಲು 30 ದಿನಗಳ ಕಾಲಾವಕಾಶ ಬೇಕು ಎಂದು ಬ್ಯಾಂಕ್ಗೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಬ್ಯಾಂಕ್ ಅಧಿಕಾರಿಗಳು, 2022ರ ಫೆಬ್ರವರಿ 10ರ ವರೆಗೆ ಕಾಲಾವಕಾಶ ನೀಡಿದ್ದರು. ಆದರೆ, ದಂಪತಿ ಬಾಕಿ ಮೊತ್ತ ಪಾವತಿ ಮಾಡಿರಲಿಲ್ಲ.
ಬಳಿಕ ಅದೇ ಆಸ್ತಿಯನ್ನು ಬ್ಯಾಂಕ್ 11 ಕೋಟಿ ರೂ. ಅಂದರೆ 2 ಕೋಟಿ ರೂ.ಗಳ ಕಡಿಮೆ ಬೆಲೆಗೆ ಮಾರಾಟ ಮಾಡಿತ್ತು.
ವಿಚಾರಣೆ ವೇಳೆ ದಂಪತಿಯ ಪರ ವಕೀಲರು, ಬ್ಯಾಂಕ್‌ನ ಭದ್ರತಾ ನಿಯಮಗಳ ಪ್ರಕಾರ ಮೂರು ತಿಂಗಳ ಕಾಲ ಅವಧಿಯನ್ನು ವಿಸ್ತರಿಸಬಹುದಾಗಿದೆ. ಆದರೆ, ಕೆನರಾ ಬ್ಯಾಂಕ್ ಇದಕ್ಕೆ ಅವಕಾಶ ನೀಡಿಲ್ಲ. ಈ ಸಂಬಂಧ ಪ್ರಶ್ನೆ ಮಾಡಿದ್ದರೂ, ಬ್ಯಾಂಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಾದ ಮಂಡಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಮುಂಗಡವಾಗಿ ಠೇವಣಿ ಇಟ್ಟಿರುವ ಮೊತ್ತವನ್ನು ಹಿಂಪಡೆಯಲು ದಂಪತಿ ಅರ್ಹರಿದ್ದಾರೆ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಸರ್ಕಾರದ ಟೆಂಡರ್ ಪ್ರಕ್ರಿಯೆಯ ಷರತ್ತುಗಳನ್ನು ನ್ಯಾಯಾಲಯ ಪರಿಶೀಲಿಸಲಾಗದು: ಹೈಕೋರ್ಟ್