ಬೆಂಗಳೂರು : ಹಿಂದೂ ಪದದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಪ್ರಕರಣವನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ಸಮ್ಮತಿಸಿದೆ. ಬೆಂಗಳೂರಿನ ವಕೀಲ ದಿಲೀಪ್ ಕುಮಾರ್ ಅವರು ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಜಾ ಮಾಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅರ್ಜಿ ವಿಚಾರಣೆಗೆ ಅನುಮತಿ ನೀಡಿದ್ದಾರೆ.
ಅಲ್ಲದೇ, ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಲು ನಿರಾಕರಿಸಿ 2023ರ ಮಾರ್ಚ್ 27 ರಂದು ಆದೇಶಿಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ್ದಾರೆ. ಜತೆಗೆ, ಐಪಿಸಿ ಸೆಕ್ಷನ್ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500 ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು. ಈ ಆದೇಶದಲ್ಲಿ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಪೀಠ ತಿಳಿಸಿದೆ.
ಪ್ರಸ್ತುತದ ಪ್ರಕರಣದಲ್ಲಿ ಅರ್ಜಿದಾರರು ಸುದ್ದಿಯ ತುಣುಕು ಸಲ್ಲಿಸಿದ್ದು, ಅದರಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ ಎಂದು ವಿವರಿಸಲಾಗಿದೆ. ಇದು ಪ್ರತಿವಾದಿಯ ವಿರುದ್ಧ ಈ ಹಂತದಲ್ಲಿ ಐಪಿಸಿ ಸೆಕ್ಷನ್ 153ರ ಅಡಿ ಸಂಜ್ಞೇ ಪರಿಗಣಿಸಲು ಇದು ಸಾಕಾಗಲಿದೆ. ಪ್ರತಿವಾದಿಯ ಹೇಳಿಕೆಯು ಅವಹೇಳನ ಮಾಡುವಂಥದ್ದೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಲಿದೆ. ಪ್ರಕರಣವು ಪ್ರಾಥಮಿಕ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂಥದ್ದಲ್ಲ. ಇದಲ್ಲದೇ, ವಿಚಾರಣಾಧೀನ ನ್ಯಾಯಾಲಯವು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳು ನಿರ್ದಿಷ್ಟವಾಗಿ ಗುರುತಿಸಬಹುದಾದ ವ್ಯಕ್ತಿಗಳಲ್ಲ ಎಂಬ ತೀರ್ಮಾನಕ್ಕೆ ಬರುವಾಗ ಪ್ರಮಾದ ಎಸಗಿದೆ ಎಂದು ತಿಳಿಸಿ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು? : ಕಾರ್ಯಕ್ರಮವೊಂದರಲ್ಲಿ ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳನ್ನು ಖಂಡಿಸಿ ರಾಜ್ಯದ ಕೆಲವು ಕಡೆಗಳಲ್ಲಿ ಪ್ರತಿಭಟನೆಯೂ ನಡೆದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದು, ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದರು.
ಇದನ್ನೂ ಓದಿ : ಕ್ರಿಮಿನಲ್ ಕೇಸ್ ದಾಖಲು : ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?