ಬೆಂಗಳೂರು: ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ ಪ್ರಕರಣದ ಸಂಬಂಧ ಪೊಲೀಸರು ಸದ್ಯ ಮೃತದೇಹದ ತುಂಡುಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.
ತನಿಖಾ ತಂಡ ಕ್ರೈಂ ಸೀನ್ ಪರಿಶೀಲನೆ ನಡೆಸಿದೆ. ಸೋಕೋ ತಂಡ ಮೃತದೇಹದ ತುಂಡಗಳ ಸ್ಯಾಂಪಲ್ ಕಲೆ ಹಾಕಿದೆ. ಸದ್ಯ ಪೊಲೀಸರು 28 ದೇಹದ ಭಾಗಗಳನ್ನು ಪತ್ತೆ ಮಾಡಿದ್ದಾರೆ. ಈಗಾಗಲೇ ಮೃತದೇಹದ ತುಂಡುಗಳ ಸ್ಯಾಂಪಲ್, ಅಳತೆ, ಬೌನ್ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬರುತ್ತಿವೆ. ಆರೋಪಿ ಕೊಲೆ ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅವುಗಳನ್ನು ಫ್ರಿಡ್ಜ್‌ನಲ್ಲಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ. ಹೀಗಾಗಿ ಮೃತದೇಹ ತುಂಡುಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಆದರೆ ಕರೆಂಟ್ ಹೋದ ಸಂದರ್ಭದಲ್ಲಿ ಮೃತದೇಹದ ತುಂಡುಗಳಿಂದ ರಕ್ತ ಫ್ರಿಡ್ಜ್ನಿಂದ ಕೆಳ ಸೋರಿಕೆಯಾಗಿ ಅದಕ್ಕೆ ಹುಳುಗಳು ಸೇರಿದ್ದರಿಂದ ದುರ್ವಾಸನೆ ಬರುತ್ತಿತ್ತು.
ಸ್ಥಳೀಯರು ಹೇಳಿದ್ದೇನು?: ಘಟನೆ ನಡೆದ ಕಟ್ಟಡದಲ್ಲಿ ವಾಸಿಸುತ್ತಿರುವ ರೇವತಿ ಎಂಬುವರು ಪ್ರತಿಕ್ರಿಯಿಸಿ, ''ನಾವು ಹಲವು ವರ್ಷದಿಂದ ಇಲ್ಲಿ ಬಾಡಿಗೆಗೆ ಇದ್ದೇವೆ. ಮೃತ ಮಹಿಳೆಯು ಕಳೆದ ಆರು ತಿಂಗಳಿಂದಲೂ ಇಲ್ಲಿ ವಾಸವಾಗಿದ್ದರು. ಅವರು ಮನೆಯಲ್ಲಿ ಒಬ್ಬರೆ ಇದ್ದರು. ಈ ಘಟನೆ ನಡೆದು ಕೆಲ ದಿನಗಳು ಕಳೆದರೂ ಯಾರಿಗೂ ಗೊತ್ತಾಗಿಲ್ಲ. ಆಗಾಗ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಮನೆ ಮೇಲಿನವರಿಗೆ ಸ್ವಲ್ಪ ವಾಸನೆ ಬಂದಿದೆ. ಆದರೆ ಯಾರು ಈ ಬಗ್ಗೆ ತಲೆಕೆಡಿಸಿಕೊಂಡು ಪರಿಶೀಲಿಸಿಲ್ಲ. ಇವತ್ತು ಮಹಿಳೆಯ ತಾಯಿ ಬಂದು ನೋಡಿ ಕಿರುಚಾಡಿದರು. ಅದಾದ ಮೇಲೆಯೇ ನಮಗೆ ವಿಷಯ ಗೊತ್ತಾಗಿದೆ. ಅಲ್ಲಿವರೆಗೂ ನಮಗೆ ಈತರ ಆಗಿದೆ ಅಂತ ಗೊತ್ತಿರಲಿಲ್ಲ'' ಎಂದು ಹೇಳಿದರು.
ಏನಿದು ಘಟನೆ: ಮಹಿಳೆಯನ್ನು ಹತ್ಯೆಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿದ ಆರೋಪಿ ಪರಾರಿಯಾದ ಆಘಾತಕಾರಿ ಘಟನೆ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ಮಹಾಲಕ್ಷ್ಮೀ (29) ಬರ್ಬರವಾಗಿ ಹತ್ಯೆಯಾದ ಮಹಿಳೆ.
ಮೃತ ಮಹಿಳೆಯು ವಿವಾಹಿತೆಯಾಗಿದ್ದು, ವೈಯಕ್ತಿಕ ಕಾರಣಕ್ಕಾಗಿ ಪತಿ ಹುಕುಂ ಸಿಂಗ್ ರಾಣಾ ಹಾಗೂ ಮಗುವನ್ನು ತೊರೆದು ಮುನೇಶ್ವರನಗರದಲ್ಲಿ ವಾಸವಿದ್ದರು. ಪತಿ ಹಾಗೂ ಮಗು ನೆಲಮಂಗಲದಲ್ಲಿ ನೆಲೆಸಿದ್ದರು. ಮಹಿಳೆಯು ಕಳೆದ ಐದು ತಿಂಗಳುಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ; ದೇಹ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಆರೋಪಿ - Murder In Bengaluru