ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 212(1)ಕ್ಕೆ ನಿಯಮಾವಳಿ ಸಮಿತಿಯ ಮಧ್ಯಂತರ ವರದಿಯಲ್ಲಿ ಮಾಡಿದ್ದ ತಿದ್ದುಪಡಿ ಶಿಫಾರಸನು ವಿಧಾನಸಭೆ ಅಂಗೀಕರಿಸಿತು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ತಿದ್ದುಪಡಿ ನಿಯಮವನ್ನು ಮಂಡಿಸಿ ನಿಯಮಾವಳಿ ಸಮಿತಿ ಸಭೆ ಸೇರಲು ಕೋರಂ ಸಮಸ್ಯೆಯಾಗುತ್ತದೆ. ಆ ಸಮಸ್ಯೆ ಪರಿಹಾರಕ್ಕಾಗಿ ಈ ತಿದ್ದುಪಡಿ ತರಲಾಗಿದೆ. ಎಲ್ಲಾ ಸ್ಥಾಯಿ ಸಮಿತಿಗಳಿಗೂ ಅನ್ವಯವಾಗಲಿದ್ದು, ಸಭೆ ನಡೆಸಲು ಅನುಕೂಲವಾಗಲಿದೆ ಎಂದರು.
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿಗಳ ಸಭೆಗೆ ಅಧಿಕಾರಿಗಳು ಬಂದಿರುತ್ತಾರೆ. ಸದಸ್ಯರು ಸರಿಯಾಗಿ ಬರುವುದಿಲ್ಲ. ಬರುವಂತೆ ಮಾಡಬೇಕು ಎಂದು ಹೇಳಿದರು. ಸ್ಪೀಕರ್ ಯು.ಟಿ.ಖಾದರ್, ನೀವು ನೀಡಿದ ಸಲಹೆ ಉತ್ತಮವಾಗಿದ್ದು, ಆಲೋಚನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಹಕ್ಕುಬಾಧ್ಯತಾ ಸಮಿತಿಯಲ್ಲಿ ಹಿರಿಯ ಶಾಸಕರು ಸದಸ್ಯರಾಗಿದ್ದಾರೆ. ಅವರು ಸರಿಯಾಗಿ ಸಭೆಗಳಿಗೆ ಬರುವುದಿಲ್ಲ. ಅವರು ಶ್ರೀಮಂತರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಕಾನೂನು ಸಚಿವರು ಈ ಸಮಸ್ಯೆ ಪರಿಹಾರಕ್ಕಾಗಿಯೇ ತಿದ್ದುಪಡಿ ತರಲಾಗಿದೆ. ಇದನ್ನು ಅಂಗೀಕರಿಸಬೇಕು ಎಂದು ಕೋರಿದಾಗ ಮಧ್ಯಂತರ ವರದಿಯಲ್ಲಿ ಮಾಡಲಾಗಿದ್ದ ಶಿಫಾರಸಿನಂತೆ ತಿದ್ದುಪಡಿ ಅಂಗೀಕರಿಸಲಾಯಿತು.