ಬೆಂಗಳೂರು: ಸಿದ್ದರಾಮಯ್ಯನವರಿಗೆ ತೊಂದರೆಯಾದರೆ ತೆಲಂಗಾಣ ಸರ್ಕಾರವೂ ಹೋಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಇಂದು ಬೆಂಗಳೂರಿನ ಸರ್ಕಾರಿ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಪಕ್ಷ ಸಿಎಂ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಹಾಗಾಗಿ ಸಿಎಂ ಬದಲಾವಣೆಯ ಪ್ರಶ್ನೆಯೇ ಉದ್ಭವಿಸೋದಿಲ್ಲ. ಇಲ್ಲದಿದ್ದರೆ ಇಂದು ಕರ್ನಾಟಕ, ನಾಳೆ ತೆಲಂಗಾಣದಲ್ಲೂ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸಲು ಯತ್ನಿಸುತ್ತಾರೆ. ಅಲ್ಲಿಯ ಸರ್ಕಾರ ತೆಗೆಯುವ ಪ್ರಯತ್ನ ಆಗುತ್ತದೆ ಎಂದರು.
ಹೀಗಾಗಿ ಸಿದ್ದರಾಮಯ್ಯನವರನ್ನು ಉಳಿಸಿಕೊಳ್ಳಲೇಬೇಕು. ಸರ್ಕಾರ ಬೀಳಲು ಬಿಜೆಪಿಗೆ ಅವಕಾಶ ನೀಡಬಾರದು. ಈಗಾಗಲೇ ಹೈಕಮಾಂಡ್ ಸಿದ್ದರಾಮಯ್ಯ ಬೆನ್ನಿಗಿದೆ. ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕು. ರಾಜ್ಯಪಾಲರ ಅಧಿಕಾರ ದುರುಪಯೋಗ ಗೊತ್ತಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ನವರು ಕುಗ್ಗಿಸಲು ಹೊರಟಿದ್ದಾರೆ. ಅವರನ್ನು ಕುಗ್ಗಿಸಿದರೆ ಸರ್ಕಾರವನ್ನು ಬೀಳಿಸಬಹುದೆಂಬ ಲೆಕ್ಕಾಚಾರದಲ್ಲಿ ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯರ ಮೇಲೆ ಯಾವುದೇ ಆರೋಪ ಸಾಬೀತಾಗಿಲ್ಲ. ಬೇಕಿದ್ರೆ ತನಿಖೆ ಆಗಲಿ. ಸಿದ್ದರಾಮಯ್ಯರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಅವರ ವರ್ತನೆ ನೋಡಿದ್ರೇನೇ ಗೊತ್ತಾಗುತ್ತೆ. ಕಾನೂನು ಹಾಗೂ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.