ದೊಡ್ಡಬಳ್ಳಾಪುರ: ಇಲ್ಲಿನ ಭಕ್ತರಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ನಡೆದ ಬೆಂಕಿ ಅವಘಡ ಇಡೀ ಕುಟುಂಬವನ್ನೇ ಬೀದಿಗೆ ತಂದಿದೆ. ಲಲಿತಾಬಾಯಿ ಎಂಬವರಿಗೆ ಸೇರಿದ ಮನೆಯಲ್ಲಿ ಸಂಭವಿಸಿದ ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದ್ದವು. ಮಕ್ಕಳ ವಿದ್ಯಾಭ್ಯಾಸಕ್ಕಿಟ್ಟಿದ್ದ ಹಣ, ಆಹಾರ ಧಾನ್ಯ, ದಾಖಲೆಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳು ಬೆಂಕಿಯ ಜ್ವಾಲೆಯಲ್ಲಿ ಉರಿದು ಬೂದಿಯಾಗಿವೆ. ಬಟ್ಟೆಗಳನ್ನು ಬಿಟ್ಟರೆ ಕೈಯಲ್ಲಿ ನಯಾಪೈಸೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್ ನೆರವಾದರು.
ಎರಡು ತಿಂಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಲಲಿತಾ ಅವರ ಪತಿ ಸಾವನ್ನಪ್ಪಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿದ್ದರು. ಲಲಿತಾರಿಗೆ ಐವರು ಮಕ್ಕಳಿದ್ದು, ಅವರ ಹಸಿವು ನೀಗಿಸಲು ಕೂಲಿ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಗಂಡನ ಸಾವಿನ ದುಃಖವನ್ನೇ ಮರೆತಿರದ ಕುಟುಂಬಕ್ಕೆ ಬೆಂಕಿ ಅವಘಡ ಬರಸಿಡಿಲಂತೆ ಬಡಿದಿತ್ತು.
ಈ ವಿಷಯ ತಿಳಿದ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಶನಿವಾರ ಬೆಳಗ್ಗೆ ಲಲಿತಾ ಅವರ ಮನೆಗೆ ಭೇಟಿ ನೀಡಿದರು. ಕುಟುಂಬಕ್ಕೆ ಧೈರ್ಯ ತುಂಬಿ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳೊಂದಿಗೆ, ಮನೆ ದುರಸ್ಥಿ ಕಾರ್ಯ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಕುಟುಂಬದ ಸ್ಥಿತಿ ನೋಡಿ ಮರುಗಿದ ತಹಶೀಲ್ದಾರ್ ವೈಯಕ್ತಿಕವಾಗಿಯೂ ಸಹಾಯ ಮಾಡಿ ಮಾನವೀಯತೆ ಮೆರೆದರು.