ಬೆಳಗಾವಿ: ಇವರು ತಾವು ಕಲಿಸುತ್ತಿರುವ ಶಾಲೆಯ ಅಭಿವೃದ್ಧಿ ಜೊತೆಗೆ ದತ್ತು ಪಡೆದ ಶಾಲೆಯಲ್ಲೂ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅರ್ಧ ವೇತನವನ್ನೇ ಶೈಕ್ಷಣಿಕ ಸೇವೆಗೆ ಮೀಸಲಿಟ್ಟಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಟೊಂಕ ಕಟ್ಟಿ ನಿಂತ ಬೆಳಗಾವಿಯ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಒಲಿದು ಬಂದಿದೆ. ಶಿಕ್ಷಕರ ದಿನಾಚರಣೆ ದಿನ ಈ ಆದರ್ಶ ಶಿಕ್ಷಕಿ ಕುರಿತು 'ಈಟಿವಿ ಭಾರತ'ದ ವಿಶೇಷ ವರದಿ ಇಲ್ಲಿದೆ.
ಇವರ ಹೆಸರು ಆಸ್ಮಾ ಇಸ್ಮಾಯಿಲ್ ನದಾಫ್. ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಮರಾಠಿ ಶಾಲೆಯ ಶಿಕ್ಷಕಿ. ಇವರ ಶೈಕ್ಷಣಿಕ ಸೇವೆಗೆ ರಾಜ್ಯ ಮಟ್ಟದ ಶಿಕ್ಷಕಿ ಪುರಸ್ಕಾರ ಒಲಿದಿದ್ದು, ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸ್ವಂತ ಹಣದಲ್ಲಿ ಎಲ್ಕೆಜಿ, ಯುಕೆಜಿ ಆರಂಭ: ಗುರುಮಾತೆ ಆಸ್ಮಾ ಅವರು ಬೆಳಗಾವಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.21 ಅನ್ನು ದತ್ತು ಪಡೆದಿದ್ದಾರೆ. ಬಡ ಮಕ್ಕಳ ಅನುಕೂಲಕ್ಕಾಗಿ ಈ ಶಾಲೆಯಲ್ಲೇ ಪ್ರಸಕ್ತ ವರ್ಷದಿಂದ ಸ್ವಂತ ಖರ್ಚಿನಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ.
ಸದ್ಯ ಈ ಶಾಲೆಯಲ್ಲಿ ಮೊದಲ ವರ್ಷದಲ್ಲೇ 33 ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಪಾಠ ಮಾಡುವ ಶಿಕ್ಷಕಿಗೆ ಪ್ರತಿ ತಿಂಗಳು 7 ಸಾವಿರ ರೂ. ಮತ್ತು ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿಗೆ 3 ಸಾವಿರ ರೂ. ವೇತನವನ್ನು ಆಸ್ಮಾ ಅವರೇ ಪಾವತಿಸುತ್ತಿದ್ದಾರೆ. ಇದಷ್ಟೇ ಅಲ್ಲ ತಮ್ಮ ವೇತನದ ಅರ್ಧಷ್ಟು ಹಣವನ್ನು ಇಂಥ ಕಾರ್ಯಕ್ಕೆ ಮೀಸಲಿಟ್ಟಿರುವುದು ಮತ್ತೊಂದು ವಿಶೇಷ.
ಶ್ರೀಮಂತರು ಲಕ್ಷಾಂತರ ರೂ. ಖರ್ಚು ಮಾಡಿ ದೊಡ್ಡ ದೊಡ್ಡ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆ. ಆದರೆ, ಬಡವರ ಮನೆ ಮಕ್ಕಳು ಎಲ್ಲಿಗೆ ಹೋಗಬೇಕು?. ಹಾಗಾಗಿ, ಸರ್ಕಾರಿ ಶಾಲೆಯಲ್ಲೆ ಎಲ್ಕೆಜಿ, ಯುಕೆಜಿ ಆರಂಭಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಬಾಳಿಗೆ ಆಸ್ಮಾ ಬೆಳಕಾಗಿದ್ದಾರೆ.
ಈ ಕುರಿತು ಮಾತನಾಡಿರುವ ಆಸ್ಮಾ, ನನ್ನ ಶೈಕ್ಷಣಿಕ ಸೇವೆ ಗುರುತಿಸಿ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದೆಯೂ ಇದೇ ರೀತಿ ಸಾಮಾಜಿಕ ಸೇವೆ ಮುಂದುವರಿಸುತ್ತೇನೆ. ನಮ್ಮ ಯಜಮಾನರ ಸಹಕಾರ ಸಾಕಷ್ಟಿದೆ. ಪ್ರಶಸ್ತಿ ಮೊತ್ತ 25 ಸಾವಿರ ರೂ. ಹಣವನ್ನೂ ನಾನು ದತ್ತು ಪಡೆದಿರುವ ಶಾಲೆಯ ಅಭಿವೃದ್ಧಿಗೆ ಬಳಸುತ್ತೇನೆ ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಕ್ಲಾಸ್ ನಿರ್ಮಾಣ: 2007-2017 ರವರೆಗೆ 10 ವರ್ಷ ನಿಪ್ಪಾಣಿ ತಾಲೂಕಿನ ಮಮದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಹುಕ್ಕೇರಿ ತಾಲೂಕಿನ ಅಮ್ಮಣಗಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ 2 ವರ್ಷ ಸೇವೆ ಸಲ್ಲಿಸಿರುವ ಆಸ್ಮಾ ಅವರು, ಈಗ ಐದು ವರ್ಷಗಳಿಂದ ಅಂಬೇವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಇಲ್ಲಿ ಬಂದ್ ಆಗಿದ್ದ ಕಂಪ್ಯೂಟರ್ ತರಗತಿ ಆರಂಭಿಸಿ ಓರ್ವ ಶಿಕ್ಷಕರನ್ನು ನೇಮಿಸಿ ಅವರಿಗೆ ಪ್ರತಿ ತಿಂಗಳು 3 ಸಾವಿರ ರೂ. ನೀಡುತ್ತಿದ್ದಾರೆ.
ಅಲ್ಲದೇ 50 ಸಾವಿರ ರೂ ಖರ್ಚು ಮಾಡಿ ಕಲರ್ ಫುಲ್ ವಾಲ್, ಲೈಟಿಂಗ್ಸ್, ಕಾರ್ಟೂನ್ ಚಿತ್ರಗಳನ್ನು ಬಿಡಿಸಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿದ್ದಾರೆ. ಇನ್ನು ಪ್ರತಿವರ್ಷ ತಮ್ಮ ಹುಟ್ಟು ಹಬ್ಬದ ನಿಮಿತ್ತ 1ನೇ ತರಗತಿಯ ವಿದ್ಯಾರ್ಥಿಗಳಿಗೆ ಅನೇಕ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.
ತಂದೆ-ತಾಯಿ ಇಲ್ಲದ ಮಕ್ಕಳಿಗೂ ಆರ್ಥಿಕ ನೆರವು ನೀಡಿದ್ದೇನೆ. ಒಟ್ಟಾರೆ, ಇದೊಂದು ಸೇವೆ ಎಂದು ತಿಳಿದುಕೊಂಡು ಮಾಡುತ್ತಿದ್ದೇನೆ. ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಅಂಥ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ನನಗೆ ಸಂತೃಪ್ತಿ ಇದೆ ಎನ್ನುತ್ತಾರೆ ಶಿಕ್ಷಕಿ ಆಸ್ಮಾ ನದಾಫ್.
ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.21ರ ಶಿಕ್ಷಕ ಡಿ.ಹೆಚ್.ಜಮಾದಾರ್ ಅವರು 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಹಿಂದಿನ ವರ್ಷ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭಕ್ಕೆ ಆಸ್ಮಾ ನದಾಫ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೇಳೆ ವಾಗ್ದಾನ ಮಾಡಿದಂತೆ ನಮ್ಮ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿ, ಅವರಿಗೆ ವೇತನ ನೀಡುತ್ತಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆ ಅನುಮತಿ ಪಡೆದಿದ್ದೇವೆ. ಸದಾಕಾಲ ಬಡ ಮಕ್ಕಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿರುವ ಆಸ್ಮಾ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.
"ಕಳೆದ 17 ವರ್ಷಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಇದೇ ರೀತಿ ಅವರು ಮತ್ತಷ್ಟು ಸೇವೆ ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ. ಇವರ ಕಾರ್ಯ ನಮಗೂ ಪ್ರೇರಣೆ ಆಗಿದೆ" - ಸಂಜಯ್ ಕೋಲಕಾರ, ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.21 ಮುಖ್ಯೋಪಾಧ್ಯಾಯ
ಇದನ್ನೂ ಓದಿ: ಹತ್ತೂರು ಸುತ್ತಿ ದೇಣಿಗೆ ಸಂಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ ಶಿಕ್ಷಕ! - Teachers Day Special