ಮಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೇಂದ್ರದ ಅನುದಾನ ಪಡೆಯಲು ಪಾಕಿಸ್ತಾನದ ರೀತಿ ವರ್ತಿಸುತ್ತಿದೆ ಎಂಬ ಹೇಳಿಕೆ ನೀಡಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟನೆ ನೀಡಿದರು. ಕೇಂದ್ರದ ಅನುದಾನ ಪಡೆಯುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಪಾಕಿಸ್ತಾನದ ರೀತಿ ವರ್ತಿಸುತ್ತಿದೆ ಎಂದು ಸುದ್ದಿಸಂಸ್ಥೆಗೆ ನೀಡಿರುವ ಹೇಳಿಕೆ ವಿಚಾರವಾಗಿ ಅವರು ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿದರು.
ಕರ್ನಾಟಕ-ತಮಿಳುನಾಡಿನವರು ಸಹೋದರ- ಸಹೋದರಿಯರಿದ್ದಂತೆ. ಆದ್ದರಿಂದ ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಿಜವಾಗಲೂ ಕರ್ನಾಟಕದಲ್ಲಿ ನೀರಿಗೆ ತೊಂದರೆಯಿದೆ. ಆದರೆ ಕೇಂದ್ರ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುತ್ತದೆ. ಆದ್ದರಿಂದ ಭಾವನಾತ್ಮಕ ವಿಚಾರ ಕೈಬಿಟ್ಟು, ಎಲ್ಲಾ ರಾಜ್ಯಗಳು ಚೆನ್ನಾಗಿರಬೇಕೆಂದು ನೋಡಬೇಕು. ಇದರಲ್ಲಿ ರಾಜಕೀಯವಾಗಿ ಮಾತನಾಡುವ ವಿಚಾರವೇ ಇಲ್ಲ ಎಂದರು.
2019ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಸೂಚಿಸಲಾಗಿದ್ದ 295 ಯೋಜನೆಗಳನ್ನು ಸಂಪೂರ್ಣಗೊಳಿಸಲಾಗಿದೆ. ಇದೀಗ ಪ್ರಧಾನಿಯವರು ಹೊಸದಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಮತ್ತೆ ಮೋದಿಯವರ ಕೈ ಬಲಪಡಿಸಿ. 400ಕ್ಕೂ ಹೆಚ್ಚು ಸೀಟ್ಗಳಲ್ಲಿ ಬಿಜೆಪಿ ಗೆಲ್ಲಬೇಕು. ಹಾಗಾಗಿ ಎಲ್ಲರೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಬಿಜೆಪಿಯ ಪ್ರಣಾಳಿಕೆಗೆ ಅನುಗುಣವಾಗಿ ಪಕ್ಷದ ಎಲ್ಲ ಅಭ್ಯರ್ಥಿಗಳೂ ಕೂಡ ತಮ್ಮದೇ ಪ್ರಣಾಳಿಕೆಗಳನ್ನು ಮತದಾರರ ಮುಂದಿಡಬೇಕು ಎಂಬುದು ಪಕ್ಷದ ನೀತಿ ಹಾಗೂ ನಿರ್ದೇಶನವಾಗಿದೆ. ಅದರಂತೆ ಕ್ಯಾಪ್ಟನ್ ಬ್ರಿಜೇಶ್ ಚೌಟರು ತಮ್ಮ ಕಾರ್ಯಸೂಚಿಯನ್ನು ಇಂದು ಕ್ಷೇತ್ರದ ಮತದಾರರ ಮುಂದಿಟ್ಟಿದ್ದಾರೆ. ಇಂದು ಬೆಳಗಿನಿಂದ ಜಿಲ್ಲೆಯ ಹಲವು ಕಡೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಹೋದ ಕಡೆಗಳಲ್ಲೆಲ್ಲ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.
ಕ್ಯಾ.ಬ್ರಿಜೇಶ್ ಚೌಟರ 'ನವಯುಗ-ನವಪಥ' ಪ್ರಣಾಳಿಕೆ ಬಿಡುಗಡೆ: ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ 'ನವಯುಗ-ನವಪಥ' ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಆಯೋಜಿಸಿದ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಅವರು ಕ್ಯಾಪ್ಟನ್ ಬ್ರಿಜೇಶ್ ಚೌಟರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ: 'ಭಾರತೀಯ ಚೊಂಬು ಪಾರ್ಟಿ ಬಿಜೆಪಿ, ಕನ್ನಡಿಗರಿಗೆ ಅನ್ಯಾಯ ಮಾಡಿದೆ': ಸುರ್ಜೇವಾಲಾ - Surjewala