ಬೆಳಗಾವಿ: ಜಗದೀಶ್ ಶೆಟ್ಟರ್ ಮತ್ತು ಅವರ ತಂದೆ ಮೂರು ಸಾವಿರ ಮಠದ ಭಕ್ತರು. ಅವರು ಬೆಳಗಾವಿಗೆ ಬಂದ ಮೇಲೆ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಲು ಬಂದಿದ್ದೇನೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ತಿಳಿಸಿದರು.
ಶನಿವಾರ ಬೆಳಗಾವಿ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ದಿ.ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದರು. ಈ ವೇಳೆ, ಸಂಸದೆ ಮಂಗಲ ಅಂಗಡಿ, ಶೆಟ್ಟರ್ ಪತ್ನಿ ಶಿಲ್ಪಾ, ಸೊಸೆಯಂದಿರಾದ ಅಂಚಲ್, ಶ್ರದ್ಧಾ ಸೇರಿ ಕುಟುಂಬಸ್ಥರು ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಗುರುಶಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಜಗದೀಶ್ ಶೆಟ್ಟರ್ ಅವರ ಕುಟುಂಬ ಹುಬ್ಬಳ್ಳಿಯ ಮೂರು ಸಾವಿರ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಖಾಸಗಿ ಕೆಲಸದ ನಿಮಿತ್ತವಾಗಿ ಬೆಳಗಾವಿಗೆ ಬಂದಿದ್ದೆ. ಹಾಗಾಗಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಆಶೀರ್ವಾದ ಮಾಡಲು ಬಂದಿದ್ದೇನೆ ಎಂದು ಹೇಳಿದರು.
ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ಭೇಟಿ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಚುನಾವಣೆಗೆ ಎಷ್ಟು ದಿನ ಬೇಕಾದ್ರೂ ಇರಲಿ. ಚುನಾವಣೆಗೆ ಎರಡು ದಿನ, ಮೂರು ದಿನ ಇದ್ದಾಗಲೇ ಆಶೀರ್ವಾದ ಮಾಡಲು ಬರಬೇಕು ಅಂತಾ ಏನಿಲ್ಲ. ನಮ್ಮ ಉದ್ದೇಶ ಅದು ಆಗಿರಲಿಲ್ಲ ಎಂದರು.
ಭಕ್ತರಿಗೆ ಏನು ಸಂದೇಶ ನೀಡುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಯೋಗೀಂದ್ರ ಗುರುಶಿದ್ಧ ಸ್ವಾಮೀಜಿ, ನಾವು ಏನೂ ಸಂದೇಶ ಕೊಡುವುದು ಏನೂ ಇಲ್ಲ. ಭಕ್ತರಿಗೆ ಮಾಧ್ಯಮಗಳು ಎಲ್ಲವನ್ನು ತಿಳಿಸುತ್ತಿವೆ. ನಮ್ಮದು ಆಶೀರ್ವಾದವಷ್ಟೇ. ಒಳ್ಳೆಯದು ಆಗಲಿ ಎಂದು ಹಾರೈಸುವುದಷ್ಟೇ. ಅಲ್ಲದೇ ನಮ್ಮ ದಿವ್ಯವಾಣಿ ಒಳ್ಳೆಯದು ಆಗಲಿ ಎಂದು ಶುಭ ಹಾರೈಸುವುದಷ್ಟೆ ಎಂದು ಹೇಳಿದರು.
ಈ ವೇಳೆ ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ, ಕೋರ್ತಿ ಕೋಲಾರದ ಗಾಣಿಗ ಸಮಾಜದ ಸ್ವಾಮೀಜಿ, ಅರಳಿಕಟ್ಟಿ ವೀರಕ್ತಮಠದ ಸ್ವಾಮೀಜಿ, ಘಟಪ್ರಭಾ ಹೊಸಮಠದ ಶ್ರೀಗಳು, ಬೀದರ್ ವೀರಕ್ತಮಠದ ಸ್ವಾಮೀಜಿ, ತಾರಿಹಾಳ ಅಡಿವೇಶ್ವರಮಠದ ಸ್ವಾಮೀಜಿ ಉಪಸ್ಥಿತರಿದ್ದರು.
ಸಂವಿಧಾನ ಬದಲಾಯಿಸಲು ಅಂಬೇಡ್ಕರ್ ಅವರಿಂದಲೂ ಸಾಧ್ಯವಿಲ್ಲ: ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇತ್ತಿಚೆಗೆ ನಮ್ಮ ಹಿರಿಯ ನಾಯಕರು ಈ ಬಗ್ಗೆ ಹೇಳಿಕೆ ನೀಡಿದ್ದು, ಸ್ವತಃ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಮನಸ್ಸು ಮಾಡಿದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಈ ವಿಚಾರದಲ್ಲಿ ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿ ಜನಾಂಗದ ಜನರ ದಿಕ್ಕನ್ನೂ ತಪ್ಪಿಸುತ್ತಿದ್ದಾರೆ. ಆದರೆ, ಜನರು ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ತಿರುಗೇಟು ಕೊಟ್ಟರು.
ಮೂರು ಸಾವಿರ ಮಠಕ್ಕೂ ನಮಗೂ ತಂದೆಯವರ ಕಾಲದಿಂದಲೂ ಬಹಳ ಆತ್ಮೀಯ ಸಂಬಂಧವಿದೆ. ಮೂರು ಸಾವಿರ ಮಠಕ್ಕೆ ನಾನು ಮತ್ತು ನಮ್ಮ ತಂದೆಯವರು ಬಹಳ ಭಕ್ತಿಪೂರ್ವಕವಾಗಿ ನಡೆದುಕೊಂಡು ಬಂದಿದ್ದೇವೆ. ಹಿಂದಿನ ಸ್ವಾಮೀಜಿ ಅವರಿಗೂ ಮತ್ತು ತಂದೆಯವರ ನಡುವೆ ಆತ್ಮೀಯ ಸಂಬಂಧವಿತ್ತು. ಈಗಲೂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೆವು. ಚುನಾವಣೆಗೆ ನಿಂತ ಮೇಲೆ ಅಲ್ಲಿಗೆ ಹೋಗಿ ಸ್ವಾಮೀಜಿ ಆಶೀರ್ವಾದ ಪಡೆಯಬೇಕು ಎಂದುಕೊಂಡಿದ್ದೆ, ಅವರು ಕೆಲಸದ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಮನೆಗೆ ಬಂದು ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಒಳ್ಳೆಯ ರೀತಿ ಪ್ರಚಾರ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸುಧಾರಣೆ ಆಗುತ್ತಿದೆ. ಎಲ್ಲಿ ವೀಕ್ ಇದೆ ಎನ್ನುತ್ತಿದ್ದೆವು, ಅಲ್ಲೆಲ್ಲಾ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲಿಸುತ್ತಿದ್ದಾರೆ. ಬೆಳಗ್ಗೆಯಿಂದ ಫೋನ್ ಬರುತ್ತಿದ್ದು, ನೀವು ನಮ್ಮ ಕಡೆ ಬಂದಿಲ್ಲ ಬರಬೇಕು ಎಂಬ ಆಗ್ರಹ ಕೇಳಿ ಬಂದಿವೆ. ಹಾಗಾಗಿ, ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿ ಹೋಗಿ ಬರುತ್ತೇನೆ. ಬೈಲಹೊಂಗಲ, ಸವದತ್ತಿ, ರಾಮದುರ್ಗಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ಗೆ ಮತ ನೀಡುವಂತೆ ನಿರಂಜನ ಹಿರೇಮಠ ಹೇಳಿಕೆಗೆ, ನಾನು ಅದರ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಮಾನವೀಯ ದೃಷ್ಟಿಯಿಂದ ಏನು ಕೆಲಸ ಮಾಡಬೇಕೋ ಮಾಡಿದ್ದೇನೆ. ನಿರಂಜನ ಹಿರೇಮಠ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಜಗದೀಶ ಶೆಟ್ಟರ್ ಹೇಳಿದರು.