ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಮುಜಾಮಿಲ್ ಪಾಷಾ ಎಂಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ಆತನನ್ನು ನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈತ ಕೆಫೆ ಸ್ಫೋಟದ ಪ್ರಮುಖ ಆರೋಪಿಗೆ ಬಾಂಬ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಾಗಿಸಿರುವ ಜತೆಗೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಅನುಮತಿ ನೀಡುವಂತೆ ಮಾಡಿಕೊಂಡ ಮನವಿ ಪುರಸ್ಕರಿಸಿದ ಕೋರ್ಟ್, ಶಂಕಿತನನ್ನು ಏಳು ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ.
ಬಾಂಬ್ ಸ್ಫೋಟದ ಆರೋಪಿಗೆ ಬೇಕಾದ ಕಚ್ಚಾವಸ್ತು ಪೂರೈಕೆ ಸೇರಿದಂತೆ ಬೇಕಾದ ಮೂಲಸೌಕರ್ಯ ಒದಗಿಸಿದ ಆರೋಪದ ಮೇರೆಗೆ ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಮುಜಾಮಿಲ್ ಷರೀಫ್‌ನನ್ನು ಗುರುವಾರ ಬಂಧಿಸಲಾಗಿತ್ತು. ಕಳೆದ ಆರು ತಿಂಗಳ ಹಿಂದೆ ಬೆಂಗಳೂರು ತೊರೆದು ಮೂಡಿಗೆರೆಯ ಚಿಕನ್ ಕೌಂಟಿಯಲ್ಲಿ ಈತ ಕೆಲಸ ಮಾಡುತ್ತಿದ್ದನು. ತೀರ್ಥಹಳ್ಳಿಯ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನಾಗಿರುವ ಅಬ್ದುಲ್ ಮತೀನ್ ತಾಹಾ ಹಾಗು ಮುಜಾಮಿಲ್ ಎಸ್ಎಸ್ಎಲ್ಸಿವರೆಗೂ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಶಂಕಿತನನ್ನು ಬಂಧಿಸಿದ ಎನ್ಐಎ - Rameshwaram Cafe Blast