ಉಡುಪಿ: ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್ಗಳಲ್ಲಿ ಸಂಭ್ರಮದ ಸೂಪರ್ಮೂನ್ ಇಂದು (ಅ.17ರ ಹುಣ್ಣಿಮೆ) ಗೋಚರಿಸಲಿದೆ. ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು ಕೂಡ ಕಾಣಲಿದೆ.
ಭೂಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಈ ಕುರಿತು ಮಾತನಾಡಿ, ''ಈ ವರ್ಷ ಸರಣಿ ಸೂಪರ್ ಮೂನ್ಗಳು ನಡೆಯುತ್ತಿವೆ. ಈ ಬಾರಿಯ ಸೂಪರ್ ಮೂನ್ನಲ್ಲಿ ಇಂದಿನ ಹುಣ್ಣಿಮೆಯ ಸೂಪರ್ ಮೂನ್ ಅತಿ ದೊಡ್ಡದು. ಹುಣ್ಣಿಮೆಯೇ ಚಂದ, ಹುಣ್ಣಿಮೆಯ ಚಂದ್ರ ದೊಡ್ಡದಾಗಿ ಕಂಡರೆ ಮತ್ತೂ ಚಂದ. ಕಳೆದ ಹುಣ್ಣಿಮೆಗಿಂತ ಈ ಬಾರಿ ಚಂದ್ರ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತಾನೆ. 3,57,363 ಕಿಲೋಮೀಟರ್ ದೂರದಲ್ಲಿ ಚಂದ್ರ ಕಾಣಿಸುತ್ತಾನೆ. ಚಂದ್ರ ಭೂಮಿಗೆ ಸುತ್ತು ಬರುವಾಗ ದೀರ್ಘ ವೃತ್ತಾಕಾರದಲ್ಲಿ ಕಾಣುತ್ತಾನೆ'' ಎಂದರು.
''ಚಂದ್ರನು ಸಮೀಪದ ದೂರದಲ್ಲಿ 3,60,000 ಕಿಲೋ ಮೀಟರ್ಗಿಂತ ಕಡಿಮೆ ಬಂದಾಗ ದೊಡ್ಡದಾಗಿ ಕಾಣಿಸುತ್ತಾನೆ. ಈ ಬಾರಿ ನಾಲ್ಕು ಸರಣಿ ಸೂಪರ್‌ಮೂನ್‌ಗಳಿವೆ. ನಾಲ್ಕು ಸೂಪರ್ಮೂನ್ ಕೂಡಾ ಹತ್ತಿರದಿಂದ ಕಾಣಿಸಲಿವೆ. ಆದರೆ ಸದ್ಯ ಎಲ್ಲೆಡೆ ಮೋಡ, ಮಳೆ ಇದೆ. ಮಳೆ ಹೋಗಿ ಆಕಾಶದಲ್ಲಿ ಚಂದ್ರ ಕಂಡರೆ ಅದ್ಭುತ ನೋಟ. ಈ ವೇಳೆ ತಿಳಿ ಮೋಡ ಬಂದರೆ ಚಂದ್ರನ ಸುತ್ತ ಕೊಡೆ ಹಿಡಿದಂತೆ ಕಾಣುತ್ತದೆ. ಪಶ್ಚಿಮದಲ್ಲಿ ಒಂದು ಧೂಮಕೇತು ಕೂಡ ಕಾಣಿಸಲಿದೆ. ಆಕಾಶದಲ್ಲಿ ಮೋಡ ಕವಿದ ಕಾರಣ ಕಾಣಿಸದೇ ಇರಬಹುದು. ಸಂಜೆ ಅವಕಾಶ ಸಿಕ್ಕರೆ ಧೂಮಕೇತು ಕಾಣಿಸಲಿದೆ. ಸೂರ್ಯಾಸ್ತದ 15 -20 ನಿಮಿಷ ನಂತರ ಕಾಣಿಸಲಿದೆ. ಸೂರ್ಯಾಸ್ತದ ನಂತರ ಧೂಮಕೇತು ಕಾಣಿಸಿದರೆ, ಪೂರ್ವದಲ್ಲಿ ನಾನೇ ಆಕಾಶದ ರಾಜ ಎಂಬಂತೆ ಚಂದ್ರ ಕಾಣಿಸಲಿದ್ದಾನೆ'' ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಇಂದು ರಾತ್ರಿ ಭೂಮಿಗೆ ತೀರಾ ಹತ್ತಿರಕ್ಕೆ ಬರಲಿದ್ದಾನೆ ಚಂದಿರ: ಚಂದ್ರನನ್ನು ಸೂಪರ್ ಮೂನ್ ಎಂದು ಕರೆಯೋದೇಕೆ?