ETV Bharat / state

ಉಡುಪಿಯಲ್ಲಿ ಅಂಬರ್​ಗ್ರಿಸ್ ಡೀಲ್: ಮಫ್ತಿಯಲ್ಲಿದ್ದ ಅಧಿಕಾರಿಗಳ ಮೇಲೆ ಗಂಭೀರ ಹಲ್ಲೆ ಆರೋಪ - ASSAULT ON OFFICIALS

ಮಫ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಅವರಿಂದ ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತುಕೊಂಡಿರುವುದಾಗಿ ದೂರು ದಾಖಲಾಗಿದೆ.

Incident place
ಘಟನಾ ಸ್ಥಳ (ETV Bharat)
author img

By ETV Bharat Karnataka Team

Published : Dec 19, 2024, 3:24 PM IST

ಉಡುಪಿ: ಸಮುದ್ರ ತೀರದಲ್ಲಿ ಅಂಬರ್​​ಗ್ರಿಸ್ ಮಾರಾಟದ ಬಗ್ಗೆ (ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ವೀಕ್ಷಣಾ ದಳದ ಅಧಿಕಾರಿಗಳ ಮೇಲೆ ಸ್ಥಳೀಯರು ಗಂಭೀರವಾಗಿ ಹಲ್ಲೆ‌ ನಡೆಸಿದ ಘಟನೆ ತಾಲೂಕಿನ ಎಂ.ಕೋಡಿಯಲ್ಲಿ ಬುಧವಾರ ನಡೆದಿದೆ‌.

ಕುಂದಾಪುರ ತಾಲೂಕಿನ ಕೋಡಿಯ ಸೌಹಾರ್ದ ಭವನದಲ್ಲಿ ಅಂಬರ್​​ಗ್ರಿಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 1.40ರ ವೇಳೆಗೆ ಮಂಗಳೂರಿನ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಎಸ್.ಐ ಜಾನಕಿ ಹಾಗೂ ಸಿಬ್ಬಂದಿ ಮಾರುವೇಷದಲ್ಲಿ ತೆರಳಿದ್ದರು. ಶೋಧ ಕಾರ್ಯಾಚರಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆಯುವ ವೇಳೆ ಅಧಿಕಾರಿಗಳ‌ ತಂಡದ ಮೇಲೆ‌ ತಪ್ಪು ಗ್ರಹಿಕೆ ಮಾಡಿ ಆರೋಪಿಗಳು ಹಾಗೂ ಸ್ಥಳೀಯರು ಸೇರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತುಕೊಂಡಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಾದ ಜಯಕರ ರತ್ನಾಕರ್​, ಅಬೂಬಕ್ಕರ್, ಆಸೀಫ್ ಸೇರಿದಂತೆ ಇತರರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲ ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ದರೋಡೆಕೋರರ ತಂಡ ದರೋಡೆಗೆ ವಿಫಲ ಪ್ರಯತ್ನ ನಡೆಸಿತ್ತು. ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಘಟನೆ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದರಿಂದ ಕೋಡಿಯಲ್ಲಿ ಅಧಿಕಾರಿಗಳ ಮೇಲೆ ತಪ್ಪು ಗ್ರಹಿಕೆಯಿಂದ ಹಲ್ಲೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಎಸ್.ಐ ನಂಜಾ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಸೋಪು, ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಸಾಗಣೆ: ₹24 ಕೋಟಿಯ ಎಂಡಿಎಂಎ ವಶ, ವಿದೇಶಿ ಮಹಿಳೆ ಅರೆಸ್ಟ್

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.