ಧಾರವಾಡ: "ಜಿಲ್ಲೆಯ ಐತಿಹಾಸಿಕ ಕೆಲಗೇರಿ ಕೆರೆ ಅವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು" ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ವಾರ್ನಿಂಗ್ ಕೊಟ್ಟಿದ್ದಾರೆ.
ಕೆಲಗೇರಿ ಕೆರೆಗೆ ದಿಢೀರ್ ಭೇಟಿ ನೀಡಿ ವೀಕ್ಷಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೆಲಗೇರಿ ಕೆರೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ, ನಿತ್ಯ ಯೋಗ ಮಾಡುವ ಹಿರಿಯ ನಾಗರಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಇಲ್ಲಿಗೆ ಬಂದು ಪರಿಶೀಲನೆ ಮಾಡಿದೆ. ಜನ ಹೇಳಿದ್ದಕ್ಕಿಂತ ಜಾಸ್ತಿ ಅವ್ಯವಸ್ಥೆ ಕಂಡಿದೆ. ಕೆರೆಗೆ ಒಂದು ಬೇಲಿ ಇಲ್ಲ. ಕೆರೆಯ ಮಾಲೀಕತ್ವ ಕೃಷಿ ವಿವಿಯ ಕೈಯಲ್ಲಿದೆ. ಪಾಲಿಕೆ ಅಥವಾ ಜಿಲ್ಲಾಡಳಿತಕ್ಕೆ ಅದನ್ನು ಹಸ್ತಾಂತರ ಮಾಡಿಲ್ಲ. ಹಾಗಾಗಿ ಕೆರೆಯನ್ನು ಅವರು ಸ್ವಚ್ಛಗೊಳಿಸಬೇಕು ಎಂದು ಇವರು, ಇವರು ಮಾಡಬೇಕು ಅಂತ ಅವರು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸ ಆಗಿಲ್ಲ" ಎಂದು ಹರಿಹಾಯ್ದರು.
"ಪರಿಶೀಲನೆ ವೇಳೆ, ದಾರಿಯಲ್ಲಿ ಕಳೆ ಗಿಡಗಳು ಬೆಳೆದಿದ್ದು, ಬೇಲಿ ಇಲ್ಲದೆ, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಉಂಡು ಮಾಡುತ್ತಿದೆ. ಇಲ್ಲಿ ಬೆಳೆದ ಕಳೆ ಗಿಡಗಳು ಈ ಮಳೆಗೆ ಬೆಳೆದಿದ್ದು ಅಲ್ಲ. ಬಹಳ ದಿನಗಳಿಂದ ಬೆಳೆದ ಗಿಡಗಳವು. ತ್ಯಾಜ್ಯ ನೀರು ಸಹ ಬಂದು ಸೇರುತ್ತಿದೆ. ಅದಕ್ಕೆ ಸರಿಯಾದ ಕಾಲುವೆ ನಿರ್ಮಿಸಿಲ್ಲ. ಇರುವ ಕಾಲುವೆಗಳನ್ನೂ ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಕಸವನ್ನು ತಂದು ಇಲ್ಲಿ ರಾಶಿ ಹಾಕಲಾಗಿದೆ. ಎಲ್ಲ ಅವ್ಯವಸ್ಥೆಗಳು ಎದ್ದು ಕಾಣುತ್ತಿವೆ. ಸಾರ್ವಜನಿಕರು ನಡೆದಾಡುವ ದಾರಿಯನ್ನು 20 ದಿನಗಳಲ್ಲಿ ಸ್ವಚ್ಛ ಮಾಡುತ್ತೇವೆ ಎಂದು ಪಾಲಿಕೆಯವರು ಹೇಳಿದ್ದಾರೆ. 20 ದಿನಗಳಲ್ಲಿ ಎಲ್ಲ ಸ್ವಚ್ಛ ಮಾಡಿ ವಿಡಿಯೋ, ಫೋಟೋ ಕಳುಹಿಸಬೇಕು. ಎಸ್‌ಟಿಪಿ ಪ್ಲ್ಯಾಂಟ್ ಸಹ ಆರಂಭಿಸಲು ಗಡುವು ಕೊಟ್ಟಿದ್ದೇನೆ. ಇಲ್ಲವಾದಲ್ಲಿ ಸ್ವಯಂಪ್ರೇರಿತ ಕೇಸ್ ಮಾಡಿಕೊಳ್ಳುತ್ತೇವೆ. ಹೊಣೆಗಾರರನ್ನೆಲ್ಲ ಪಾರ್ಟಿ ಮಾಡಿ ಕೇಸ್ ಮಾಡಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ವುಲಾರ್ ಕೆರೆ ಉದ್ದಕ್ಕೂ ನಿಗೂಢವಾಗಿ ಸತ್ತುಬಿದ್ದಿರುವ ಬಾತುಕೋಳಿಗಳು : ವನ್ಯಜೀವಿ ತಜ್ಞರ ಕಳವಳ