ಮಂಡ್ಯ : ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಪರ ಸುಮಲತಾ ಪ್ರಚಾರ ವಿಚಾರವಾಗಿ ಮಂಡ್ಯ ಕೈ ಶಾಸಕ ಗಣಿಗ ರವಿಕುಮಾರ್ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಅಕ್ಕ- ತಮ್ಮಾ ಅಲ್ಲವಾ?. ಸುಮಲತಾ ಪ್ರಚಾರ ಮಾಡ್ತಾರೆ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಕ-ತಮ್ಮ ಒಂದಾಗಿದ್ದಾರೆ. ನಾವು ಯಾಕೆ ಮಾತನಾಡೋದು. ಕಳೆದ ಚುನಾವಣೆಯಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ರೆ ಚೆನ್ನಾಗಿರೋದು. ಹೋದ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲ ಅಂತಾ ಸುಮಲತಾ ಹೇಳ್ತಿದ್ದಾರೆ. ನಾನೇ ಗೆದ್ದೆ ಅಂತಿದ್ದಾರೆ. ಅದು ಮುಗಿದ ಅಧ್ಯಾಯ. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದಿದ್ದಾರೆ.
ಅಂಬಿ ಫ್ಯಾನ್ಸ್ ಕುಮಾರಸ್ವಾಮಿ ಪರ ಕೆಲಸ ಮಾಡ್ತಾರಾ? ಎಂಬ ವಿಚಾರವಾಗಿ ಮಾತನಾಡಿದ ಅವರು, ಅಂಬರೀಶಣ್ಣನ ಅಭಿಮಾನಿಗಳ ರಕ್ತ, ದೇಹ, ಮನಸ್ಸು ಕಾಂಗ್ರೆಸ್. ಅವರ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಆಗಿಯೆ ಇದ್ದರು. ಅವರನ್ನ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಅಕ್ಕ - ತಮ್ಮನ ನಡುವೆ ದಾಯಾದಿ ಕಲಹ ಮರೆತು ಹೋಗಿದ್ದಾರಾ?. ತಮ್ಮ ಅಕ್ಕನಿಗೆ ಕೊಟ್ಟ ಕಾಟಾವನ್ನ ಅಂಬಿ ಅಭಿಮಾನಿಗಳು ಮರೆಯುತ್ತಾರಾ?. ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇರ್ತಾರೆ. 2 ಲಕ್ಷ ಮತಗಳಿಂದ ಸ್ಟಾರ್ ಚಂದ್ರು ಗೆಲ್ತಾರೆ ಎಂದರು.
ಮಂಡ್ಯ ಲೋಕಸಭಾ ಚುನಾವಣಾ ಅಖಾಡಕ್ಕೆ ರಾಷ್ಟ್ರೀಯ ನಾಯಕರು ಎಂಟ್ರಿ ಕೊಡಲಿದ್ದಾರೆ. ಯುಗಾದಿ ನಂತರ ಮತ್ತಷ್ಟು ಪ್ರಚಾರ ಚುರುಕುಗೊಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಇದರಿಂದ ಮಂಡ್ಯದಲ್ಲಿ ಮತ್ತಷ್ಟು ಚುನಾವಣಾ ಕಣ ರಂಗೇರಲಿದೆ. ಏ. 16 ಅಥವಾ 17ಕ್ಕೆ ಮಂಡ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ ಕೊಡಲಿದ್ದಾರೆ. ಇಂದು - ನಾಳೆಯಲ್ಲಿ ದಿನಾಂಕ ನಿಗದಿಯಾಗಲಿದೆ. ಈಗಾಗಲೇ ನಾಲ್ಕು ಸುತ್ತಿನ ಚುನಾವಣಾ ಪ್ರಚಾರವನ್ನು ಮುಗಿಸಿರುವ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಆಗಮನದಿಂದ ಕಾಂಗ್ರೆಸ್ಗೆ ಶಕ್ತಿ ಸಿಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೂಡ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ವಿರುದ್ದ ಅಖಾಡದಲ್ಲಿ ಮಣಿಸಲು ಕಾಂಗ್ರೆಸ್ ಸಜ್ಜಾಗಿದೆ.
ಜನರ ಉತ್ಸಾಹ ಕೂಡ ಕಾಂಗ್ರೆಸ್ ಪರ ಇದೆ: ಜೆಡಿಎಸ್ - ಬಿಜೆಪಿ ಮೈತ್ರಿ ಹೊಂದಾಣಿಕೆ ಜನರಿಗೆ ಸಮಾಧಾನ ಇಲ್ಲ ಎಂದು ಸಚಿವ ಎನ್. ಚಲುವರಾಯಸ್ವಾಮಿ ಅವರು ಹೇಳಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಪ್ರಚಾರಕ್ಕೆ ಬಾರದ ಬಗ್ಗೆ ಪ್ರತಿಕ್ರಿಯಿಸಿದರು. ಪ್ರಭಾವಿ ನಾಯಕರು ಅಂತ ಒಂದೇ ದಿನದಲ್ಲಿ ಬಂದು ಟಾಟಾ ಮಾಡ್ತಾರೇನೊ ಗೊತ್ತಿಲ್ಲ ಎಂದರು.
ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಿಗದಿಯಾಗಿದೆ. ಬಿಸಿಲಿನ ತಾಪಮಾನ ಜಾಸ್ತಿ ಇದೆ. ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸುತ್ತಿನ ಪ್ರಚಾರ ಮಾಡಿದ್ದೇವೆ. ಜನರ ಉತ್ಸಾಹ ಕೂಡ ಕಾಂಗ್ರೆಸ್ ಪರ ಇದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಜೆಡಿಎಸ್-ಬಿಜೆಪಿಯಿಂದ ಸಾಕಷ್ಟು ಜನ ಕಾಂಗ್ರೆಸ್ ಸೇರ್ಪಡೆಯಾಗ್ತಿದ್ದಾರೆ. ಜೆಡಿಎಸ್-ಬಿಜೆಪಿ ಎರಡೂ ಪಕ್ಷದ ಹೊಂದಾಣಿಕೆ ಜನರಿಗೆ ಸಮಾಧಾನ ಇಲ್ಲ. ಹಿಂದೆ ಕಾಂಗ್ರೆಸ್ - ಜೆಡಿಎಸ್ ಒಂದಾದಾಗ ಹೇಗೆ ಅಸಮಾಧಾನ ಇತ್ತೋ, ಅದೇ ರೀತಿ ಬಿಜೆಪಿ - ಜೆಡಿಎಸ್ ಒಂದಾದಾಗಲೂ ಅಸಮಾಧಾನ ಇದೆ ಎಂದರು. ಎಲ್ಲ ತಾಲೂಕಿನಲ್ಲಿ ಮನೆ ಮನೆಗೆ ನಮ್ಮ ಮುಖಂಡರು ತೆರಳಿ ಪ್ರಚಾರ ನಡೆಸುತ್ತಿದ್ದು, ಜೊತೆಗೆ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಮೈತ್ರಿ ಅಭ್ಯರ್ಥಿಯಿಂದ ಕಾಂಗ್ರೆಸ್ ಶಾಸಕರಿಗೆ 10 ಕೋಟಿ ಆಮಿಷ, ಬೆದರಿಕೆ: ಶಾಸಕ ಗಣಿಗ ರವಿಕುಮಾರ್ ಆರೋಪ