ಮಂಡ್ಯ: ಟಿಕೆಟ್ ಸಿಗುತ್ತದೋ, ಸಿಗಲ್ಲವೋ ಎಂಬ ಅನುಮಾನ ನನಗೆ ಇಲ್ಲ. ನನಗೆ ಬಿಜೆಪಿ - ಜೆಡಿಎಸ್ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಸೋಮವಾರ ಮಂಡ್ಯದಲ್ಲಿ ಸುದ್ದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಂಡ್ಯ ಲೋಕಸಭಾ ಟಿಕೆಟ್ ಬಗ್ಗೆ ನಿಮಗೆ (ಮಾಧ್ಯಮ) ವಿಶ್ವಾಸ ಇಲ್ಲದಿರಬಹುದು. ಆದರೆ, ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಹೈಕಮಾಂಡ್ ಮಟ್ಟದಲ್ಲಿ ನಡೆದ ಸಭೆಯಲ್ಲಿ ಈ ಐದು ವರ್ಷದ ಜರ್ನಿಯಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ವಿಸ್ತೃತ ಚರ್ಚೆಗಳು ನಡೆದವು. ಮಂಡ್ಯ ವಿಚಾರ ಸೇರಿದಂತೆ ಹಲವು ಸಂಗತಿಗಳು ತುಂಬಾ ಪಾಸಿಟಿವ್ ಆಗಿ ಹೊರ ಬಂದವು. ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಮಂಡ್ಯವನ್ನು ಬಿಡಬೇಡಿ, ನಾವು ನಿಮ್ಮನ್ನು ನಂಬಿದ್ದೇವೆ, ನಿಮ್ಮ ಜೊತೆ ಇರುತ್ತೇವೆ ಎಂದು ಮಾತು ಸಹ ನೀಡಿದ್ದಾರೆ. ಟಿಕೆಟ್ ಸಿಗುತ್ತೊ, ಸಿಗಲ್ವೋ ಎಂಬ ಡೌಟ್ ನನಗಿಲ್ಲ. ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆದರೆ, ನನ್ನ ಜೊತೆ ದ್ವೇಷ ಇರುತ್ತಾ? ಎಂದು ಸುಮಲತಾ ಪ್ರಶ್ನಿಸಿದರು.
ಜೆಡಿಎಸ್ ಪಕ್ಷ ಎನ್‌ಡಿಎ ಒಂದು ಭಾಗ. ಅದೇ ರೀತಿ ನಾನು ಸಹ ಎನ್‌ಡಿಎದ ಒಂದು ಭಾಗ. ಮಹಿಳಾ ಮಿಸಲಾತಿ ತಂದಿದ್ದು ಬಿಜೆಪಿ. ಹೀಗಾಗಿ ನನಗೆ ಮಂಡ್ಯ ಟಿಕೆಟ್ ಅನ್ನು ಬಿಜೆಪಿ ನೀಡುತ್ತೆ ಎಂಬು ವಿಶ್ವಾಸ ಇದೆ. ಮೈತ್ರಿ ಅಂತ ಬಂದ ಮೇಲೆ ಜೆಡಿಎಸ್ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿ ಆದ್ರೆ ಜೆಡಿಎಸ್ ಪಕ್ಷದವರನ್ನು ಹೋಗಿ ಕೇಳುವೆ. ಮೈತ್ರಿ ವಿಶ್ವಾಸದಿಂದ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುವೆ. ಮೈತ್ರಿಯಲ್ಲಿ ಜೆಡಿಎಸ್ ವಿಶ್ವಾಸದಲ್ಲಿ ಇರುತ್ತೆ ಎಂಬ ನಂಬಿಕೆ ಇದೆ ಎಂದರು.
ಒಂದು ವೇಳೆ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲ ಉಂಟಾದಲ್ಲಿ ಎಂಬ ಪ್ರಶ್ನೆಗೆ, ಟಿಕೆಟ್ ಗೊಂದಲ ಬಗೆಹರಿಸಬೇಕಿರೋದು ವರಿಷ್ಠರು. ಅವರು ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡ್ತಾರೆ. ಜೆಡಿಎಸ್ ಅವರಿಗೆ ಟಿಕೆಟ್ ಆದ್ರೆ ಅವರು ನನ್ನ ಕೇಳಿದ್ರೆ, ವಿಶ್ವಾಸದಲ್ಲಿ ಇರುತ್ತೇನೆ. ಇದು ಕೊನೆಯಲ್ಲ, ಮುಂದೆ ಏನಾಗುತ್ತೆ ನೋಡಿ ಎಂದ ಸುಮಲತಾ, ನಾನು ಬಿಜೆಪಿ ಟಿಕೆಟ್ ಪಡೆಯುವ ಬಗ್ಗೆ ಯಾವುದೇ ಅನುಮಾನವಿಲ್ಲ, ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವುದಕ್ಕಾಗಿ ನನ್ನ ಹೋರಾಟ ಎಂದು ತಿಳಿಸಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲ ಕೇಳುವೆ. ಅವರ ಕ್ಷೇತ್ರಕ್ಕೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಅವರ ಮೇಲೆ ಅಪಾರ ಗೌರವ ಇದೆ. ಪಾಂಡವಪುರದಲ್ಲಿ ನಾನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಫೋರ್ಟ್ ಮಾಡಿದ್ದೆ. ಅವರಿಗೂ ಆತ್ಮಸಾಕ್ಷಿ ಇರಬೇಕು ಅಲ್ವಾ? ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಹೋರಾಡಿರುವೆ. ಹಲವು ರೈತ ಸಂಘದ ಜೊತೆ ನಾನು ನಿಂತಿರುವೆ. ಈಗ ಸಪೋರ್ಟ್ ಮಾಡಲಿ ಎಂದು ನಾನು ಕೇಳೋದು ಕೇಳ್ತೀನಿ ಎಂದು ಹೇಳಿದರು.
ಇದನ್ನೂ ಓದಿ: ಅಂಬರೀಶ್ ನೆಚ್ಚಿನ ಮಂಡ್ಯದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಸುಮಲತಾ