ಬೆಂಗಳೂರು: ಯೆಮೆನ್ ದೇಶದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಬಲಗಾಲು ಕಳೆದುಕೊಂಡು, ತುಂಡಾದ ಕಾಲಿನ ಭಾಗದಲ್ಲಿ ಉಂಟಾಗುತ್ತಿದ್ದ 'ಫ್ಯಾಂಟಮ್ ಲಿಂಬ್' ಎಂಬ ನೋವಿನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡ ದೇಶದಲ್ಲೇ ಇದೇ ಮೊದಲ ನ್ಯೂರೋಮಾಡ್ಯುಲೇಷನ್ ವಿಧಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿತು. ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ರಘುರಾಮ್ ಜಿ. ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ದೇಶದಲ್ಲೇ ಮೊದಲ ಬಾರಿಗೆ ನಡೆದ ಶಸ್ತ್ರಚಿಕಿತ್ಸೆ: ಈ ಕುರಿತು ಮಾತನಾಡಿದ ವೈದ್ಯರು, "ಎರಡು ವರ್ಷಗಳ ಹಿಂದೆ ಯೆಮೆನ್ ದೇಶದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಿಂದ ಯುವಕ ತನ್ನ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಆದರೆ, ಆ ಬಳಿಕವೂ ಕಾಲು ತುಂಡಾದ ಭಾಗದಲ್ಲಿ ಫ್ಯಾಂಟಮ್ ಲಿಂಬ್ ಎಂಬ ನೋವು ಅವರನ್ನು ಕಾಡುತ್ತಿತ್ತು. ಫ್ಯಾಂಟಮ್ ಲಿಂಬ್ ಎಂದರೆ ಅನುಭವಿಸಲು ಅಸಾಧ್ಯವಾದ ನೋವು. ಸಂಪೂರ್ಣವಾಗಿ ಕಾಲಿನ ಗಾಯ ವಾಸಿಯಾಗಿದ್ದರೂ ಸಹ ತುಂಡಾದ ಜಾಗದಲ್ಲಿ ಬಟ್ಟೆ ತಗುಲಿದರೂ, ಗಾಳಿ ಸೋಕಿದರೂ ಅವರಿಗೆ ಅತಿಯಾದ ನೋವು ಉಂಟಾಗುತ್ತಿತ್ತು. ಈ ನೋವಿಗೆ ದೇಶ-ವಿದೇಶದೆಲ್ಲೆಡೆ ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದರೂ ಸೂಕ್ತ ಚಿಕಿತ್ಸೆ ಲಭ್ಯವಾಗಲಿಲ್ಲ. ನಂತರ ಅವರು ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಮೊದಲು ರೋಗಿಯ ನೋವಿನ ತೀವ್ರತೆಯನ್ನು ಪರೀಕ್ಷಿಸಿದೆವು. ಅವರಿಗೆ 'ನ್ಯೂರೋಮಾಡ್ಯುಲೇಷನ್ ಪ್ರೊಸೀಜರ್' ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ದೇಶದಲ್ಲೇ ಮೊದಲ ಬಾರಿಗೆ ನಡೆಸಿದ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ" ಎಂದು ಮಾಹಿತಿ ನೀಡಿದರು.
"ಈ ಶಸ್ತ್ರಚಿಕಿತ್ಸೆಯಾದ ಒಂದು ವಾರದಲ್ಲಿಯೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸಾಮಾನ್ಯವಾಗಿ ಕೆಲವರಿಗೆ ದೇಹದ ಕೆಲವು ಅಂಗ ಕಳೆದುಕೊಂಡ ಬಳಿಕ ಹಾಗೂ ಗಾಯ ಮಾಗಿದ ಮೇಲೂ ಆ ಭಾಗದಲ್ಲಿ ಚುಚ್ಚಿದ ರೀತಿಯಲ್ಲಿ ನೋವು ಹೆಚ್ಚಾಗಿರುತ್ತದೆ. ಇದನ್ನು ಸಹಿಸಿಕೊಂಡೇ ಜೀವನ ನಡೆಸುತ್ತಿರುತ್ತಾರೆ. ಇದಕ್ಕೀಗ ಸೂಕ್ತ ಶಸ್ತ್ರಚಿಕಿತ್ಸೆ ಲಭ್ಯವಿದೆ" ಎಂದು ಅವರು ಹೇಳಿದರು.