ಮಂಗಳೂರು: ಕರ್ನಾಟಕದಲ್ಲಿ ಮೊದಲ ಬಾರಿಗೆ ಮಹಾಪಧಮನಿಯ ಅಪರೂಪದ ಹೈಬ್ರಿಡ್ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ನಡೆಸಿದೆ. ಹಾಸನದ 64 ವರ್ಷದ ಮಹಾದೇವಯ್ಯ ಎಂಬ ರೋಗಿಯೊಬ್ಬರು ಮಹಾಪಧಮನಿಯ ರಕ್ತನಾಳಕ್ಕೆ ಹೈಬ್ರಿಡ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ನ ತಜ್ಞ ವೈದ್ಯರ ತಂಡವು ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
ಭಾರತದಲ್ಲಿ ಅಪರೂಪಕ್ಕೆ ನಡೆದ ಈ ಯಶಸ್ವಿ ಶಸ್ತ್ರಚಿಕಿತ್ಸೆ ರೋಗಿಗೆ ಹೊಸ ಬದುಕನ್ನು ನೀಡಿದೆ. ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಗಿಗೆ ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಮಹಾಪಧಮನಿಯ ದೊಡ್ಡ ರಕ್ತನಾಳ, ಎದೆಯ (ಥೊರಾಸಿಕ್) ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಆದಾಗ್ಯೂ, ತಾಂತ್ರಿಕ ತೊಡಕುಗಳ ದೃಷ್ಟಿಯಿಂದ ಅನಿಶ್ಚಿತ ಫಲಿತಾಂಶ ಬರುವ ಕಾರಣದಿಂದ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಮಾಡಲು ಸಿದ್ಧರಿರಲಿಲ್ಲ. ಈ ಹಂತದಲ್ಲಿ ರೋಗಿಯ ಸಂಬಂಧಿಕರು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ರೋಗಿಯು ಬೆಂಗಳೂರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಂಗಳೂರಿನಲ್ಲಿರುವ ಡಾ ಯೂಸುಫ್ ಎ ಕುಂಬ್ಳೆ ಅವರನ್ನು ಸಂಪರ್ಕಿಸಿದ್ದಾರೆ.
ಸವಾಲನ್ನು ಸ್ವೀಕರಿಸಿದ ಇಂಡಿಯಾನಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಯೂಸುಫ್ ಎ ಕುಂಬ್ಳೆ, ಹೃದಯರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ವೈಜನಾಥ್, ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೆ ಅಶೋಕ್ ಮತ್ತು ಅವರೊಂದಿಗೆ ಹೈಬ್ರಿಡ್ ಆಂಟೆಗ್ರಾ ಮಾಡಲು ಅತ್ಯುತ್ತಮ ವೈದ್ಯರ ತಂಡವನ್ನು ರಚಿಸಲಾಗಿತ್ತು. ಎದೆಗೂಡಿನ ಎಂಡೋವಾಸ್ಕುಲರ್ ಅನ್ಯೂರಿಮ್ ಚಿಕಿತ್ಸೆ ತಂಡದಲ್ಲಿ ವೈದ್ಯ ಮತ್ತು ತೀವ್ರ ನಿಗಾ ಘಟಕ ತಜ್ಞ ಡಾ ಆದಿತ್ಯ ಭಾರದ್ವಾಜ್, ಹೃದಯ ಅರಿವಳಿಕೆ ತಜ್ಞ ಡಾ ಸುಖೇನ್ ಎನ್ ಶೆಟ್ಟಿ, ಹಿರಿಯ ಮೂತ್ರಪಿಂಡ ಶಾಸ್ತ್ರ ತಜ್ಞ ಡಾ ಪ್ರದೀಪ್ ಕೆ ಜೆ, ಹೃದ್ರೋಗ ತಜ್ಞರಾದ ಡಾ ಸಂಧ್ಯಾ ರಾಣಿ, ಡಾ ಸಯ್ಯದ್ ಮೊಹಮ್ಮದ್ ಮತ್ತು ಡಾ ಲತಾ ಇದ್ದರು.
ಈ ಚಿಕಿತ್ಸೆಯು ಯಕೃತ್ತು, ಮೂತ್ರಪಿಂಡ ಮತ್ತು ಕರುಳಿನ ಎಲ್ಲಾ ನೈಸರ್ಗಿಕ ಅಪಧಮನಿಗಳು ಕವಲೊಡೆಯುವುದನ್ನು ಒಳಗೊಂಡಿತ್ತು ಮತ್ತು ನಂತರ ಈ ಅಪಧಮನಿಗಳನ್ನು ಮಹಾಪಧಮನಿಯಿಂದ ನೇರವಾಗಿ ಕೃತಕವಾಗಿ ತಯಾರಿಸಿದ ಪೈಪ್ ಮೂಲಕ ಮರು ಅಳವಡಿಕೆ ಮಾಡಲಾಯಿತು. ಮಹಾಪಧಮನಿಯ ಸ್ಟಂಟ್ ಅಳವಡಿಕೆ ಮತ್ತು ಕಿಬ್ಬೊಟ್ಟೆಯ ಮಹಾಪಧಮನಿಯ ಸ್ಟಂಟ್ ಅಳವಡಿಕೆಯನ್ನು ಡಾ ಯೂಸುಫ್ ಎ ಕುಂಬ್ಳೆ ಅವರು ಮಾಡಿದ್ದಾರೆ. ಒಂದು ವಾರದವರೆಗೆ ಆಸ್ಪತ್ರೆಯಲ್ಲಿದ್ದ ರೋಗಿಯನ್ನು ಮೂತ್ರಪಿಂಡ ವೈಫಲ್ಯ, ಯಕೃತ್ತಿನ ವೈಫಲ್ಯ ಮತ್ತು ಗ್ರೊಟೆಸ್ಕೆಮಿಯಾಗೆ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಯಿತು. ರೋಗಿಯು ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಡಲು ಸಿದ್ಧವಾಗಿದ್ದಾರೆ.
ಡಾ ಯೂಸುಫ್ ಎ ಕುಂಬ್ಳೆ ಮಾತನಾಡಿ, "ಹಾಸನದ ಈ ರೋಗಿ ಬೆಂಗಳೂರಿನ ಆಸ್ಪತ್ರೆಯಿಂದ ಬಂದಿದ್ದರು. ಅವರಿಗೆ ಅಯೋಟಿಕ್ ಎನ್ಯುರಿಸಂ ಎಂಬ ದೊಡ್ಡ ಕಾಯಿಲೆ ಇತ್ತು. ಬೆಂಗಳೂರಿನ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ನಾವು ಪರಿಶೀಲಿಸಿದಾಗ ಹೈರಿಸ್ಕ್ ಇತ್ತು. ರೋಗಿಯ ಜೀವಕ್ಕೆ ಅಪಾಯ ಸಾಧ್ಯತೆ ಇತ್ತು. ಸ್ಟಂಟ್ ಅಥವಾ ಓಪನ್ ಸರ್ಜರಿ ಮಾಡುವುದರಿಂದ ಅಪಾಯವಿದ್ದ ಕಾರಣ ಹೈಬ್ರಿಡ್ ಪ್ರಕ್ರಿಯೆ ಮಾಡಲಾಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು" ಎಂದರು.
ರೋಗಿ ಮಹಾದೇವಯ್ಯ ಅವರ ಪುತ್ರ ಶಿವಶಂಕರ ಮಾತನಾಡಿ, "ತಂದೆಯವರಿಗೆ ಹಲವು ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿದಾಗ ಆಪರೇಷನ್ ಸಕ್ಸಸ್ ರೇಟ್ ಹೇಳಿಲ್ಲ. ಅಲ್ಲಿ ಭರವಸೆ ಸಿಗದ ಕಾರಣ ಇಲ್ಲಿ ಬಂದೆವು. ಇಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಎಲ್ಡಿಎಲ್ ಹೊಂದಿರುವವರು ಏಕಾಏಕಿ ಸ್ಟಾಟಿನ್ಸ್ಗಳನ್ನು ನಿಲ್ಲಿಸುವುದು ಅಪಾಯಕಾರಿ!