ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್ 11 ಈಗಾಗಲೇ 50 ದಿನಗಳ ಆಟವನ್ನು ಪೂರ್ಣಗೊಳಿಸಿದೆ. ಏಳನೇ ವಾರ ಅನುಷಾ ಎಲಿಮಿನೇಟ್ ಆಗಿದ್ದು, ಎಂಟನೇ ವಾರದ ಆಟ ಸಾಗಿದೆ. ಎಂಟನೇ ವಾರದ ಮುಂಜಾನೆ ಮನೆಗೆ ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳು ಆಗಮಿಸಿ, ಆಟ ಶುರು ಹಚ್ಚಿಕೊಂಡಿದ್ದಾರೆ. ಮೊದಲ ದಿನದಿಂದಲೇ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ದನಿ ಏರಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಆರ್ಭಟ ಹೆಚ್ಚೇ ಇದೆ.
ಕಳೆದ ಸಂಚಿಕೆಯಲ್ಲಿ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ಪೈಕಿ ತಂಡದ ನಾಯಕರಾಗಲು ಯಾರು ಅರ್ಹರು ಮತ್ತು ಅನರ್ಹರೆಂದು ಆರಿಸಬೇಕಾಗಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಶೋಭಾ ಶೆಟ್ಟಿ ಹೆಸರು ಸೂಚಿಸಿದ ಉಗ್ರಂ ಮಂಜು ತಮ್ಮ ಕಾರಣಗಳನ್ನು ಸಹ ಕೊಟ್ಟಿದ್ದಾರೆ. ಅವರ ಮಾತಿಗೆ ಅಸಮಧಾನಗೊಂಡ ಶೋಭಾ ಶೆಟ್ಟಿ ಇಡೀ ಮನೆಯೇ ಮೌನವಾಗುವಂತೆ ಆರ್ಭಟಿಸಿದ್ದರು. ಮಂಜು ವಿರುದ್ಧ ಮೊದಲು ಶೋಭಾ ಶೆಟ್ಟಿ ಆರ್ಭಟಿಸಿದ್ದರು. ಇದೀಗ ರಜತ್ ಕಿಶನ್ ಕೂಡಾ ಕಿಡಿಕಾರಿದ್ದಾರೆ. ಜಿದ್ದಿಗೆ ಬಿದ್ದಂತೆ ಮಾತಿಗೆ ಮಾತು ಬೆಳೆದಿದೆ.
''ಬಲಾಬಲದಲ್ಲಿ ಸಬಲರಾಗೋದು ಯಾರು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಳಿಸಿದೆ. ಇಂದಿನ ಸಂಚಿಕೆಯಲ್ಲಿ ಉಗ್ರಂ ಮಂಜು ಮತ್ತು ರಜತ್ ಕಿಶನ್ ನಡುವೆ ದೊಡ್ಡ ಮಟ್ಟದ ವಾದ ವಿವಾದ ನಡೆಯಲಿದೆ ಎಂಬುದರ ಒಂದು ನೋಟವನ್ನು ಈ ಪ್ರೋಮೋ ಒದಗಿಸಿದೆ. ಇದಕ್ಕೂ ಮುನ್ನ ''ಆಕ್ರೋಶಕ್ಕೂ, ಆವೇಶಕ್ಕೂ ಸತ್ವಪರೀಕ್ಷೆ!''ಎಂಬ ಶೀರ್ಷಿಕೆಯಡಿ ಅನಾವರಣಗೊಂಡ ಪ್ರೋಮೋದಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ನಡೆದ ಗಲಾಟೆಯ ಒಂದು ನೋಟ ಒದಗಿಸಿದೆ. ನಿನ್ನೆಯ ಸಂಚಿಕೆಯಲ್ಲಿ ಶೋಭಾ ಶೆಟ್ಟಿ ಆರ್ಭಟಿಸಿದ್ದರೆ, ಇಂದು ರಜತ್ ಕಿಶನ್ ಸಖತ್ ಸದ್ದು ಮಾಡಿದ್ದಾರೆ.
ಇದನ್ನೂ ಓದಿ: 'ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ': ಸುಮಲತಾ ಅಂಬರೀಶ್
ನಾನು, ತ್ರಿವಿಕ್ರಮ್ ಒಂದೇ ಟೀಮ್ ಅಲ್ಲಿ ಬಿದ್ವಿ ಅಂದ್ರೆ ಎದುರಾಳಿಗೆ ಸ್ವಲ್ಪ ಭಯ ಆಗುತ್ತೆ ಎಂದು ರಜತ್ ತಿಳಿಸಿದ್ದಾರೆ. ನೀವು ಒಂದ್ ಟೀಮ್ ಅಲ್ಲಿ ಇದ್ದರೆ ನಾವೆಲ್ಲಾ ವೀಕ್ ಅಂತಾನಾ ಎಂದು ಮಂಜು ಕೆರಳಿದ್ದಾರೆ. ಅದಕ್ಕೆ ಸಿಟ್ಟಲ್ಲೇ ಪ್ರತಿಕ್ರಿಯಿಸಿದ ರಜತ್, ಯಾವ್ ನನ್ ಮಗ ಇಲ್ಲಾ ಅಂತಾನೆ, ಫಿಸಿಕಲ್ ಟಾಸ್ಕ್ಗೆ ನಾವ್ ಸ್ಟ್ರಾಂಗೇ ಎಂದು ಉತ್ತರಿಸಿದ್ದಾರೆ. ಅದಕ್ಕೆ ನಾವು ವೀಕ್ ಆ ಎಂದು ಮಂಜು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಜೋರಾಗಿ ಮಾತನಾಡಬೇಡ, ನನ್ಗೂ ಬರುತ್ತೆ ಎಂದು ಮಂಜು ಅಸಮಧಾನಗೊಂಡಿದ್ದಾರೆ. ಹೀಗೆ ಇಬ್ಬರ ನಡುವೆ ಬಲಾಬಲ ವಿಷಯವಾಗಿ ವಾದ ವಿವಾದ ನಡೆದಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಇದನ್ನೂ ಓದಿ: ''ಬಳೆ ತೊಡ್ಕೋ'': ಬಿಗ್ ಬಾಸ್ನಲ್ಲಿ ಮತ್ತೆ ಬಳೆ ವಿಚಾರ; ಶೋ ಬಿಡುವೆನೆಂದ ಗೋಲ್ಡ್ ಸುರೇಶ್