ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ರಾಜ್ಯದ 10 ಪ್ರಮುಖ ನದಿಗಳು ಕಲುಷಿತಗೊಂಡಿವೆ. ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯಗಳು ನೇರವಾಗಿ ನದಿಯೊಡಲು ಸೇರುತ್ತಿರುವುದರಿಂದ ಕಲುಷಿತಗೊಂಡಿವೆ ಎಂದು ತಿಳಿಸಿದೆ.
ನದಿಗಳ ಮಾಲಿನ್ಯ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ರಾಜ್ಯದ ನದಿಗಳ ಮಾಲಿನ್ಯದ ಪ್ರಮಾಣದ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ಸಲ್ಲಿಸಿದೆ. ಅದರಂತೆ, ರಾಜ್ಯದ ಹತ್ತು ಪ್ರಮುಖ ನದಿಗಳು ಕಲುಷಿತಗೊಂಡಿವೆ.
ದಕ್ಷಿಣ ಪಿನಾಕಿನಿ ಹೆಚ್ಚು ಮಲಿನ: ಸಿಪಿಸಿಬಿ (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ವರದಿ ಪ್ರಕಾರ, ಬೆಂಗಳೂರಿನ ನಂದಿ ಬೆಟ್ಟದಲ್ಲಿ ಹುಟ್ಟಿ ಬಂಗಾಳಕೊಲ್ಲಿ ಸೇರುವ ದಕ್ಷಿಣ ಪಿನಾಕಿನಿ ನದಿ ರಾಜ್ಯದ ಅತೀ ಹೆಚ್ಚು ಕಲುಷಿತವಾಗಿದೆ. ಶುದ್ಧ ಪ್ರತಿ ಲೀಟರ್ ನೀರಿನಲ್ಲಿ 1 ಎಂಜಿ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಪಿನಾಕಿನಿ ನೀರಿನಲ್ಲಿ 111.0 ರಷ್ಟಿದೆ. ಅಘನಾಶಿನಿಯಲ್ಲಿ 3.3, ಅರ್ಕಾವತಿ 39.0, ಭದ್ರಾ 7, ಭೀಮಾ 4, ಕಾವೇರಿ 6, ಗಂಗಾವಳಿ 3.4, ಕಬಿನಿ 3.8, ಕಾಗಿಣ 3.1, ಕೃಷ್ಣ 4.7, ಲಕ್ಷ್ಮಣತೀರ್ಥ 5.6, ನೇತ್ರಾವತಿ 6.0, ಶರಾವತಿ 3.3, ಶಿಂಶಾ 9.5, ತುಂಗಾ 6.0, ತುಂಗಾಭದ್ರಾ 6.2ರಷ್ಟಿದೆ ಎಂದು ವರದಿಯಲ್ಲಿ ವಿವರಿಸಿದೆ.
ಒಟ್ಟಾರೆ ರಾಜ್ಯದ 16 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣಾ, ಕಾಗಿನ ಹಾಗೂ ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದೆ. ಹಾಗಾಗಿ ಈ ನದಿಗಳನ್ನು ಬಿಟ್ಟು ಹತ್ತು ನದಿಗಳ ಹೆಸರನ್ನು ಪ್ರಸ್ತಾಪಿಸಿ ಮಲಿನಗೊಂಡ ನದಿಗಳ ಕುರಿತ ಪ್ರಮಾಣಪತ್ರವನ್ನು ರಾಷ್ಟ್ರೀಯ ಹಸಿರು ಪೀಠಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಂತೆ, ರಾಜ್ಯದ ಆರು ನದಿಗಳು ಸೇಫ್. ಇವು ಮಾಲಿನ್ಯ ಮಟ್ಟದ ಮಿತಿಯೊಳಗಿವೆ. ಅಘನಾಶಿನಿಯಲ್ಲಿ 3.3, ಗಂಗಾವಳಿ 3.4, ಕಾಗಿಣ 3.1, ಕೃಷ್ಣಾ 4.7, ನೇತ್ರಾವತಿ 6.0, ಶರಾವತಿ 3.3 ಬಿಒಡಿ ಪ್ರಮಾಣ ಇದ್ದದ್ದು ಈಗ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ ಎಂದು ತಿಳಿಸಿದೆ. ಹಾಗಾಗಿ ಈ ನದಿಗಳ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ ಮಲಿನತೆಯ ಮಿತಿಯ ಒಳಗಿದೆ ಎಂದು ಪರಿಗಣಿಸಬಹುದಾಗಿದೆ.
ಇದನ್ನೂ ಓದಿ: 'ನದಿಗಳಿಂದ ಹುಟ್ಟಿದ ನಾಗರಿಕತೆಗಳು ಇಂದು ನದಿಗಳನ್ನೇ ನಾಶ ಮಾಡುತ್ತಿವೆ' - Polluted Rivers In India